ಶಿವಮೊಗ್ಗ: ಗಲಾಟೆ ಬಿಡಿಸಲು ಹೋಗಿ ಕೊಲೆಯಾಗಿದ್ದ ಶಾಲಾ ಬಾಲಕ ಸಂಕೇತ್‌ನ ಸಮಾಧಿಗೆ ಹಾನಿ ಮಾಡಲಾಗಿದೆ.
ಕಳೆದ ಫೆಬ್ರವರಿ 24ರಂದು ಊರಗಡೂರಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಂಕೇತ್ ಹತ್ಯೆಯಾಗಿತ್ತು. ಸಮೀಪದ ಗುಡ್ಡೆಮರಡಿಯ ಹಿಂದೂ ರುದ್ರಭೂಮಿಯಲ್ಲಿ ಸಂಕೇತ್‌ನ ಅಂತ್ಯೆಕ್ರಿಯೆ ನೆರವೇರಿಸಲಾಗಿತ್ತು.
ಸಂಕೇತ್ ಸಮಾಧಿಗೆ ಕಟ್ಟೆ ನಿರ್ಮಿಸಿ ಫೋಟೊ ಅಳವಡಿಸಲಾಗಿತ್ತು. ಮಂಗಳವಾರ ಸಂಜೆ ಸಮಾಧಿಯ ಒಂದು ಭಾಗ ಒಡೆದಿರುವುದು ಗೊತ್ತಾಗಿದೆ. ಇದರಿಂದ ಬೇಸರ ಮತ್ತು ಆಕ್ರೋಶಗೊಂಡ ಸಂಕೇತ್‌ನ ಪೋಷಕರು ತುಂಗಾ ನಗರ ಠಾಣೆಗೆ ದೂರು ನೀಡಿದ್ದಾರೆ. ಇನ್ನು, ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಿಂದೂ ರುದ್ರಭೂಮಿಯಲ್ಲಿ ಮಾರ್ಚ್ 26ರಂದು ಸಂಕೇತ್ ಸಮಾಧಿಗೆ ಕಟ್ಟೆ ಕಟ್ಟಿಸಲಾಗಿತ್ತು. ಕುಟುಂಬದವರು ಸುತ್ತಲು ಗ್ರಾನೈಟ್ ಕಲ್ಲು ಹಾಕಿಸಿದ್ದರು. ಮುಂಭಾಗದಲ್ಲಿ ದೀಪ ಇಡಲು ವ್ಯವಸ್ಥೆ ಮಾಡಿದ್ದರು. ಹಿಂಬದಿಯಲ್ಲಿ ಸಂಕೇತ್‌ನ ಫೋಟೊ ಇರಿಸಲಾಗಿತ್ತು. ಕುಟುಂಬದವರು ಪ್ರತಿ ಸಂಜೆ ಸಮಾಧಿ ಸ್ಥಳಕ್ಕೆ ಹೋಗಿ ಪೂಜೆ ಮಾಡಿ ಬರುತ್ತಿದ್ರು,
ಸಂಕೇತ್‌ಗೆ ಬುಧವಾರ ಅಂದರೆ ಪ್ರೀತಿ. ಆತ ಪ್ರತಿ ಬುಧವಾರ ಬೆಳಗ್ಗೆ ಬೇಗ ಎದ್ದು ಸ್ನಾನ ಮುಗಿಸಿ ಪೂಜೆ ಮಾಡುತ್ತಿದ್ದ. ಹಾಗಾಗಿ ಈ ಬುಧವಾರ ಸಮಾಧಿ ಸ್ಥಳಕ್ಕೆ ಕುಟುಂಬದವರೆಲ್ಲ ತೆರಳಿ ಪೂಜೆ ಸಲ್ಲಿಸುವ ಯೋಚನೆಯಲ್ಲಿದ್ದರು. ಆದರೆ ಮಂಗಳವಾರ ಸಂಜೆ ಸಮಾಧಿ ಒಡೆದ ವಿಷಯ ಪೋಷಕರಿಗೆ ತಿಳಿದು ಬಂದಿದ್ದು ಪೋಷಕರು ಬೇಸರ ವ್ಯಕ್ತಪಡಿಸಿದರು.
