ಶಿವಮೊಗ್ಗ : ಮಧ್ಯಪ್ರಾಚ್ಯದ ರಾಷ್ಟ್ರಗಳಾದ ಇಸ್ರೇಲ್ ಮತ್ತು ಇರಾನ್ ನಡುವೆ ಉಂಟಾಗುವ ಉದ್ವಿಗ್ನತೆ ಅಥವಾ ಯುದ್ಧವು ಜಗತ್ತಿನ ಅನೇಕ ದೇಶಗಳ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಇಂಧನ ಸಂಪನ್ಮೂಲಗಳಾದ ಗ್ಯಾಸ್ ಸರಬರಾಜಿನ ಮೇಲೆ ಇದರ ಪರಿಣಾಮ ಗಂಭೀರವಾಗಿರುತ್ತದೆ. ನಗರ ಪ್ರದೇಶಗಳಲ್ಲಿ ಇದು ಇನ್ನಷ್ಟು ತೀವ್ರವಾಗಿದೆ.
ಮಧ್ಯಪ್ರಾಚ್ಯವು ಜಗತ್ತಿನ ಪ್ರಮುಖ ತೈಲ ಮತ್ತು ನೈಸರ್ಗಿಕ ಗ್ಯಾಸ್ ಉತ್ಪಾದನಾ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಯುದ್ಧ ಅಥವಾ ಅಶಾಂತಿ ಉಂಟಾದರೆ, ಗ್ಯಾಸ್ ಉತ್ಪಾದನೆ ಮತ್ತು ಸಾಗಣೆ ವ್ಯತ್ಯಯಗೊಳ್ಳುತ್ತದೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಗ್ಯಾಸ್ ಕೊರತೆ ಉಂಟಾಗುತ್ತದೆ.
ಶಿವಮೊಗ್ಗ ನಗರಗಳಲ್ಲಿ ಗೃಹ ಬಳಕೆಗೆ ಬೇಕಾದ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಉಂಟಾಗುತ್ತದೆ. ಜನರು ದೀರ್ಘ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಸಣ್ಣ ಉದ್ಯಮಗಳು ತಮ್ಮ ಕಾರ್ಯಗಳನ್ನು ಕಡಿಮೆ ಮಾಡಿಕೊಂಡಿವೆ ಸುಮಾರು 30 ರಿಂದ 30 ಸ್ಥಗಿತಗೊಂಡಿವೆ.
ಇದರ ಜೊತೆಗೆ, ಗ್ಯಾಸ್ ಬೆಲೆ ಏರಿಕೆ ಕೂಡ ದೊಡ್ಡ ಸಮಸ್ಯೆಯಾಗುತ್ತದೆ. ಸಾಮಾನ್ಯ ಜನರ ಜೀವನ ವೆಚ್ಚವನ್ನು ಹೆಚ್ಚಿಸುತ್ತದೆ. ಇದರಿಂದ ನಗರಗಳಲ್ಲಿ ವಾಸಿಸುವ ಮಧ್ಯಮ ಮತ್ತು ಬಡವ ಜನರ ಹೆಚ್ಚಿನ ಬಾಧೆಯಾಗುತ್ತದೆ.
ಈ ಸಮಸ್ಯೆಯನ್ನು ತಡೆಯಲು ಸರ್ಕಾರ ಮತ್ತು ಜನರು ಕೆಲವು ಕ್ರಮಗಳನ್ನು ಕೈಗೊಳ್ಳಬೇಕು. ಗ್ಯಾಸ್ ಬಳಕೆಯನ್ನು ಮಿತಿಗೊಳಿಸುವುದು, ಪರ್ಯಾಯ ಇಂಧನಗಳ ಬಳಕೆಯನ್ನು ಉತ್ತೇಜಿಸುವುದು, ಮತ್ತು ಸರಬರಾಜು ವ್ಯವಸ್ಥೆಯನ್ನು ಸುಧಾರಿಸುವುದು ಮುಖ್ಯ. ಜೊತೆಗೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಸ್ಥಾಪನೆಯೂ ಬಹಳ ಅಗತ್ಯ.

——————————————–
ನಗರದಲ್ಲಿ ಗ್ಯಾಸ್ ಕೊರತೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಲಭ್ಯತೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಅನೇಕ ಹೋಟೆಲ್‌ಗಳು ಸೌದೆ ಓಲೆ, ವಿದ್ಯುತ್ ಹಾಗೂ ಸೋಲಾರ್ ಪರ್ಯಾಯ ಮಾರ್ಗಗಳತ್ತ ಮುಖ ಮಾಡಿದ್ದರೂ, ಅವು ಗ್ಯಾಸ್ ಓಲೆಯಷ್ಟು ಶೀಘ್ರ ಮತ್ತು ಕಡಿಮೆ ವೆಚ್ಚದ ಪ್ರಯೋಜನ ನೀಡುತ್ತಿಲ್ಲ ಎಂಬುದು ಉದ್ಯಮಿಗಳ ಅಳಲು.
ಹಲವಾರು ದೊಡ್ಡ ರೆಸ್ಟೋರೆಂಟ್‌ಗಳು ತಮ್ಮ ಮೆನು ಕಾರ್ಡ್‌ನಲ್ಲಿನ ಅರ್ಧಕ್ಕೂ ಹೆಚ್ಚು ಐಟಂಗಳನ್ನು ಕಡಿತಗೊಳಿಸಿರುವುದು ಕಂಡುಬಂದಿದೆ. ಇದರಿಂದ ಗ್ರಾಹಕರ ಸಂಖ್ಯೆಯಲ್ಲೂ ಗಮನಾರ್ಹ ಇಳಿಕೆ ಉಂಟಾಗಿದೆ. ಇನ್ನೊಂದೆಡೆ, ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳು ಕಾಳಸಂತೆಯಲ್ಲಿ 2000ರಿಂದ 2500ರವರೆಗೆ ಮಾರಾಟವಾಗುತ್ತಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಕಠಿಣಗೊಳಿಸಿದೆ.
ಹೆಚ್ಚುತ್ತಿರುವ ವೆಚ್ಚವನ್ನು ಭರಿಸುವುದು ಕಷ್ಟವಾಗಿರುವುದರಿಂದ ಕೆಲವು ಹೋಟೆಲ್‌ಗಳು ತಾತ್ಕಾಲಿಕವಾಗಿ ಬಾಗಿಲು ಮುಚ್ಚಿವೆ. ಇದರಿಂದ ಹೋಟೆಲ್ ಉದ್ಯಮಕ್ಕೆ ಅವಲಂಬಿತರಾಗಿರುವ ನೂರಾರು ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನೆಲೆ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಗ್ಯಾಸ್ ಸರಬರಾಜು ಸುಧಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಹೋಟೆಲ್ ಉದ್ಯಮಿಗಳು ಒತ್ತಾಯಿಸಿದ್ದಾರೆ. ಜೊತೆಗೆ, ಪರ್ಯಾಯ ಇಂಧನ ಬಳಕೆಗೆ ಅನುದಾನ ಹಾಗೂ ವಿದ್ಯುತ್ ದರದಲ್ಲಿ ರಿಯಾಯಿತಿ ನೀಡುವಂತೆ ಆಗ್ರಹಿಸಿದ್ದಾರೆ.
—————————————
“ಗ್ಯಾಸ್ ಸರಿಯಾದ ಸಮಯಕ್ಕೆ ಸಿಗದೇ ದಿನನಿತ್ಯದ ದುಡಿಮೆ ಅನಾನುಕೂಲವಾಗುತ್ತಿದೆ. ಇದೇ ರೀತಿ ಮುಂದುವರಿದರೆ ಕೊರೋನಾ ಸಂದರ್ಭದಲ್ಲಿದ್ದಂತೆಯೇ ಸಂಕಷ್ಟ ಎದುರಿಸಬೇಕಾಗುತ್ತದೆ. ಸರ್ಕಾರ ಆದಷ್ಟು ಬೇಗ ನಮ್ಮಂತಹವರ ಬವಣೆಗೆ ಸ್ಪಂದಿಸಬೇಕು,”
: ಬೊಂಡ್ ರಮೇಶ್, ಗೋಪಿ ಸರ್ಕಲ್,

ಬೆಳಿಗ್ಗೆ ೮ ಗಂಟೆಗೆ ಬಂದು ಗ್ಯಾಸ್ ತುಂಬಿಸಲು ಸಾಲಿನಲ್ಲಿ ನಿಂತಿದ್ದೇವೆ. ಆದರೆ ೧೦.೩೦?೧೧ ಗಂಟೆಯವರೆಗೆ ಕಾಯಿಸಿದ ಬಳಿಕವೂ ನಮ್ಮ ಬೇಡಿಕೆಯ ಅರ್ಧಷ್ಟು ಮಾತ್ರ ಸಿಗುತ್ತಿದೆ. ಇದರಿಂದ ಆಟೋ ಬಾಡಿಗೆ ಸರಿಯಾಗಿ ಮಾಡಲು ಸಾಧ್ಯವಾಗುತ್ತಿಲ್ಲ. ಮನೆ ನಿರ್ವಹಣೆಯೂ ತುಂಬಾ ಕಷ್ಟಕರವಾಗಿದೆ,”
: ಬಾಗ್ಯರಾಜ್. ಆಟೋ ಚಾಲಕ
