ಶಿವಮೊಗ್ಗ : ಭವಿಷ್ಯದ ಕನಸುಗಳು ಒಂದೆಡೆ, ಜನ್ಮಕೊಟ್ಟ ತಂದೆಯ ಅಂತಿಮ ಕ್ಷಣಗಳು ಮತ್ತೊಂದೆಡೆ ಈ ಎರಡು ಭಾವನೆಗಳ ನಡುವೆ ಸಿಲುಕಿದ ಹೃದಯದ ಹೋರಾಟ ಎಷ್ಟು ಕಠಿಣವಾಗಿರಬಹುದು ಎಂಬುದಕ್ಕೆ ಶಿವಮೊಗ್ಗ ತಾಲ್ಲೂಕಿನ ಹಸೋಡಿ ಫಾರಂ ಗ್ರಾಮದ ವಿದ್ಯಾರ್ಥಿನಿ ಶರಣ್ಯ ಜೀವಂತ ಉದಾಹರಣೆಯಾಗಿದ್ದಾಳೆ.
“ತಂದೆಯ ಸಾವಿನ ನೋವಿನಲ್ಲಿ ಪರೀಕ್ಷೆ ಬರೆಯುವುದು ತುಂಬಾ ಕಷ್ಟವಾಯಿತು. ಆದರೂ ತಾಯಿ, ಶಿಕ್ಷಕರು ಮತ್ತು ಗ್ರಾಮಸ್ಥರ ಬೆಂಬಲದಿಂದ ಪರೀಕ್ಷೆಯನ್ನು ಚೆನ್ನಾಗಿ ಬರೆದಿದ್ದೇನೆ. ಆದರೆ ತಂದೆಯ ಕಳೆವಿನ ನೋವನ್ನು ಸಹಿಸಲು ಆಗುತ್ತಿಲ್ಲ. ನಮ್ಮ ಜೀವನ ಮುಂದೇ ಹೇಗಿರುತ್ತದೆ ಎಂಬುದು ಗೊತ್ತಿಲ್ಲ.”
: ವಿದ್ಯಾರ್ಥಿನಿ ಶರಣ್ಯ
ತಂದೆ ತಂಗರಾಜ್ ಮತ್ತು ತಾಯಿ ಮೀನಾ ಕೂಲಿ ಕೆಲಸ ಮಾಡಿಕೊಂಡು ಕುಟುಂಬವನ್ನು ಸಾಗಿಸುತ್ತಿದ್ದರು. ಇಬ್ಬರು ಹೆಣ್ಣು ಮಕ್ಕಳು ಉತ್ತಮವಾಗಿ ಓದಿ ಬದುಕಿನಲ್ಲಿ ದೊಡ್ಡ ಮಟ್ಟಕ್ಕೇರಬೇಕು ಎಂಬ ಕನಸು ತಂದೆಗೆ ಇತ್ತು. ಆದರೆ ಅನಾರೋಗ್ಯದ ಹಿನ್ನೆಲೆ ತಂಗರಾಜ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಕುಟುಂಬವನ್ನು ಸಂಕಷ್ಟಕ್ಕೆ ತಳ್ಳಿದರು.
ಈ ದುರ್ಘಟನೆ ಮಂಗಳವಾರ ರಾತ್ರಿ ಸಂಭವಿಸಿತು. ಬುಧವಾರ ತರುಣ್ಯಗೆ ೧೦ನೇ ತರಗತಿಯ ಇಂಗ್ಲಿಷ್ ಪರೀಕ್ಷೆ ಇತ್ತು. ಒಂದೆಡೆ ತಂದೆಯ ಮರಣದ ದುಃಖ, ಮತ್ತೊಂದೆಡೆ ಭವಿಷ್ಯ ನಿರ್ಧರಿಸುವ ಪರೀಕ್ಷೆ ಈ ಸಂಕಷ್ಟಕರ ಪರಿಸ್ಥಿತಿಯಲ್ಲಿ ಆಕೆ ಗೊಂದಲಕ್ಕೀಡಾದಳು.
ಕುಟುಂಬದವರು, ಶಿಕ್ಷಕರು ಮತ್ತು ಸ್ನೇಹಿತರು ಧೈರ್ಯ ತುಂಬಿದ ಬಳಿಕ ತರುಣ್ಯ ಆತ್ಮಸ್ಥೈರ್ಯದಿಂದ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದಳು.
ನಂತರ ಮನೆಗೆ ಬಂದು ತಂದೆಯ ಅಂತಿಮ ದರ್ಶನ ಪಡೆದಳು.
ಈ ಘಟನೆ ಕೇವಲ ಒಂದು ವಿದ್ಯಾರ್ಥಿನಿಯ ನಿರ್ಧಾರವಲ್ಲ; ಇದು ಸಂಕಷ್ಟಗಳ ನಡುವೆಯೂ ದಿಟ್ಟ ಮನೋಬಲದಿಂದ ಮುಂದೆ ಸಾಗುವ ಶಕ್ತಿಯ ಪ್ರತಿಬಿಂಬವಾಗಿದೆ. ತಂದೆಯ ಕಳೆವಿನ ನೋವಿನ ನಡುವೆಯೇ ತನ್ನ ಭವಿಷ್ಯದತ್ತ ಹೆಜ್ಜೆಯಿಟ್ಟ ಈ ವಿದ್ಯಾರ್ಥಿನಿ ಅನೇಕರಿಗೆ ಮಾದರಿಯಾಗಿದ್ದಾಳೆ.
ಇದೀಗ ತಾಯಿ ಮತ್ತು ತಂಗಿಯ ಭವಿಷ್ಯದ ಹೊಣೆ ಹೊತ್ತಿರುವ ಶರಣ್ಯಗೆ ಬದುಕಿನ ಹಾದಿ ಸವಾಲಿನಿಂದ ಕೂಡಿದೆ. ಎಲ್ಲಾ ಸಂಕಷ್ಟಗಳನ್ನು ಜಯಿಸಿ ಆಕೆಯ ಜೀವನ ಉಜ್ವಲವಾಗಲಿ ಎಂಬುದು ಎಲ್ಲರ ಆಶಯ.
“ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು. ಈ ಕುಟುಂಬ ಈಗ ಸಂಕಷ್ಟದಲ್ಲಿದೆ. ತಂದೆಯೇ ಕೂಲಿ ಮಾಡಿ ಕುಟುಂಬವನ್ನು ಸಾಗಿಸುತ್ತಿದ್ದರು. ಈಗ ಇವರ ಭವಿಷ್ಯ ಚಿಂತಾಜನಕವಾಗಿದೆ. ಗ್ರಾಮಸ್ಥರಾಗಿ ನಾವು ಸಾಧ್ಯವಾದಷ್ಟು ಸಹಾಯ ಮಾಡುತ್ತೇವೆ.”
: ಗ್ರಾಮಸ್ಥ ಅರುಮುಗಂ
