ಶಿವಮೊಗ್ಗ : ಶಿವಮೊಗ್ಗ ತಾಲೂಕಿನ ಪ್ರಸಿದ್ಧ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ತೀವ್ರ ವಿಷಾದನೀಯ ಘಟನೆಯೊಂದು ಸಂಭವಿಸಿದ್ದು, ಜನ್ಮತಾಳಿದ ಒಂದೇ ದಿನದಲ್ಲಿ ನಾಲ್ಕು ನವಜಾತ ಸಿಂಹದ ಮರಿಗಳು ಮೃತಪಟ್ಟಿವೆ. ‘ಸಾರಾ’ ಹೆಸರಿನ ಸಿಂಹಿಣಿಗೆ ನಿನ್ನೆಷ್ಟೇ ಜನಿಸಿದ್ದ ಈ ನಾಲ್ಕೂ ಮರಿಗಳು ಸೂಕ್ತ ಪೋಷಣೆ ಸಿಗದೆ ಸಾವನ್ನಪ್ಪಿರುವುದು ಪ್ರಾಣಿಪ್ರಿಯರಲ್ಲಿ ತೀವ್ರ ಬೇಸರ ಮೂಡಿಸಿದೆ.
‘ಸಾರಾ’ ಸಿಂಹಿಣಿಗೆ ಇದು ಮೊದಲ ಗರ್ಭಧಾರಣೆಯಾಗಿತ್ತು. ಮೊದಲ ಬಾರಿಗೆ ತಾಯಿಯಾಗಿದ್ದ ಹಿನ್ನೆಲೆಯಲ್ಲಿ, ಸಿಂಹಿಣಿಯು ತನ್ನ ನವಜಾತ ಮರಿಗಳನ್ನು ಹೇಗೆ ಪಾಲಿಸಬೇಕು ಎಂಬ ಅನುಭವ ಇಲ್ಲದೆ ನಿರ್ಲಕ್ಷ್ಯ ವಹಿಸಿದೆ ಎನ್ನಲಾಗಿದೆ. ಮರಿಗಳಿಗೆ ಸರಿಯಾಗಿ ಹಾಲುಣಿಸದೇ ಇರುವುದು ಹಾಗೂ ಸೂಕ್ತ ರೀತಿಯಲ್ಲಿ ಆರೈಕೆ ಮಾಡದೇ ಇದ್ದಿದ್ದರಿಂದಲೇ ಮರಿಗಳು ಕೊನೆಯುಸಿರೆಳೆದಿವೆ ಎಂದು ಶಂಕಿಸಲಾಗಿದೆ.
ಈ ದುರಂತದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ತ್ಯಾವರೆಕೊಪ್ಪ ಸಿಂಹಧಾಮದ ಅಧಿಕಾರಿಗಳು, ಮರಿಗಳ ಸಾವಿಗೆ ನೈಜ ಕಾರಣವನ್ನು ಬಿಚ್ಚಿಟ್ಟಿದ್ದಾರೆ. “ಮೊದಲ ಬಾರಿಗೆ ತಾಯಿಯಾಗುವ ಸಿಂಹಿಣಿಗಳಲ್ಲಿ ಮರಿಗಳ ಮೇಲಿನ ವಾತ್ಸಲ್ಯ ಅಥವಾ ಅವುಗಳನ್ನು ಪೋಷಿಸುವ ಪ್ರವೃತ್ತಿ ಕೆಲವೊಮ್ಮೆ ಕೊರತೆಯಿರುತ್ತದೆ. ಸಾರಾ ಕೂಡ ಮರಿಗಳಿಗೆ ಸರಿಯಾಗಿ ಹಾಲು ನೀಡದೆ ನಿರ್ಲಕ್ಷಿಸಿದ್ದರಿಂದ ಈ ದುರಂತ ಸಂಭವಿಸಿದೆ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಅತಿಥಿಗಳ ಆಗಮನದ ನಿರೀಕ್ಷೆಯಲ್ಲಿದ್ದ ಸಿಂಹಧಾಮದ ಸಿಬ್ಬಂದಿಗೆ ಹಾಗೂ ಪ್ರಾಣಿಪ್ರೇಮಿಗಳಿಗೆ ಈ ಘಟನೆ ತೀವ್ರ ಆಘಾತವನ್ನುಂಟುಮಾಡಿದೆ.
Subscribe to Updates
Get the latest creative news from FooBar about art, design and business.
