ಶಿವಮೊಗ್ಗ: ಶಿರಾಳಕೊಪ್ಪದ 23 ವರ್ಷದ ವ್ಯಕ್ತಿಯೊಬ್ಬನು 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಆರೋಪಿಗೆ 20 ವರ್ಷಗಳ ಕಠಿಣ ಕಾರಾವಾಸ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್.ಟಿ.ಎಸ್.ಸಿ–1) ತೀರ್ಪು ನೀಡಿದೆ.
ಶಿರಾಳಕೊಪ್ಪ ನಿವಾಸಿಯಾದ ಆರೋಪಿಯು ಅಪ್ರಾಪ್ತ ಬಾಲಕಿಯನ್ನು ಪರಿಚಯ ಮಾಡಿಕೊಂಡು ಮದುವೆ ಮಾಡಿಕೊಳ್ಳುವುದಾಗಿ ಪುಸಲಾಯಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಈ ಕುರಿತು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ, ಪೋಕ್ಸೋ ಕಾಯ್ದೆ ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ತನಿಖಾಧಿಕಾರಿಗಳಾದ ಶಿಕಾರಿಪುರದ ಡಿವೈಎಸ್ಪಿ ಕೇಶವ ಕೆ.ವಿ ಪ್ರಕರಣದ ತನಿಖೆ ಪೂರ್ಣಗೊಳಿಸಿ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶ್ರೀಧರ್ ವಾದ ಮಂಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ನಿಂಗನಗೌಡ ಪಾಟೀಲ್ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 20 ವರ್ಷಗಳ ಕಠಿಣ ಕಾರಾವಾಸ ಶಿಕ್ಷೆ ಹಾಗೂ ₹1,00,000 ದಂಡ ವಿಧಿಸಿ ಆದೇಶಿಸಿದ್ದಾರೆ.
ದಿವಂಗತ ನೊಂದ ಬಾಲಕಿಯ ಕುಟುಂಬಕ್ಕೆ ಸರ್ಕಾರದ ವತಿಯಿಂದ ₹4,00,000 ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.