ಶಿವಮೊಗ್ಗ: ಶಿವಮೊಗ್ಗ ದಸರಾ ಮಹೋತ್ಸವದ ಜಂಬೂಸವಾರಿಗೆ ಸಜ್ಜಾಗುತ್ತಿರುವ ಸಕ್ರೆಬೈಲು ಆನೆ ಬಿಡಾರದ ಗಜಪಡೆಗೆ ಶಾಸಕ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ಗುರುವಾರ ವಿಶೇಷ ಪೂಜೆ ಸಲ್ಲಿಸಿ ಬರಮಾಡಿಕೊಂಡರು.

ದಸರಾ ಮೆರವಣಿಗೆಯಲ್ಲಿ ತಾಯಿ ಚಾಮುಂಡೇಶ್ವರಿಯ ಅಂಬಾರಿ ಹೊರುವ ಆನೆಗಳು ಸೇರಿದಂತೆ ಗಜಪಡೆಗೆ ಹಣ್ಣು-ಹಂಪಲು ನೀಡಿ ಪೂಜೆ ಸಲ್ಲಿಸಿದ ಅವರು, ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾಗಿರುವ ಗಜಪಡೆಯಿಂದ ಉತ್ಸವಕ್ಕೆ ಮತ್ತಷ್ಟು ಮೆರುಗು ಬರಲಿದೆ. ಯಾವುದೇ ಲೋಪವಿಲ್ಲದೆ ಉತ್ಸವ ವೈಭವ ಹಾಗೂ ಶಿಸ್ತುಬದ್ಧವಾಗಿ ನಡೆಯುವಂತೆ ದೇವರಲ್ಲಿ ಪ್ರಾರ್ಥಿಸಲಾಗಿದೆ ಎಂದರು.
ಆನೆಗಳ ಆರೋಗ್ಯ ತಪಾಸಣೆ, ಪೌಷ್ಟಿಕ ಆಹಾರ ಪೂರೈಕೆ ಹಾಗೂ ನಗರದಲ್ಲಿ ನಡೆಯಲಿರುವ ತಾಲೀಮು ಕುರಿತು ಅಧಿಕಾರಿಗಳು ಮತ್ತು ಮಾವುತರೊಂದಿಗೆ ಶಾಸಕರು ಚರ್ಚಿಸಿದರು. ನಗರದ ಜನತೆ ದಸರಾ ಮಹೋತ್ಸವದಲ್ಲಿ ಸಂಭ್ರಮದಿಂದ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ, ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನಕೃಷ್ಣ ಪಟೇಗಾರ್, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಉಪಾಧ್ಯಕ್ಷರಾದ ಜ್ಞಾನೇಶ್ವರ್, ನಾಗರಾಜ್, ನಗರಾಧ್ಯಕ್ಷ ಮೋಹನ್ ರೆಡ್ಡಿ ಸೇರಿದಂತೆ ಪಾಲಿಕೆ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
