ಶಿವಮೊಗ್ಗ, : ನಗರದ ಮಿಳಘಟ್ಟದಲ್ಲಿ ವೃದ್ಧೆಯನ್ನು ಬರ್ಬರವಾಗಿ ಹತ್ಯೆಗೈದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲು ತೆರಳಿದ ಪೊಲೀಸರ ಮೇಲೆ ಲಾಂಗ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ, ಆತ್ಮರಕ್ಷಣೆಗಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯ ಸಿಪಿಐ ಸತ್ಯನಾರಾಯಣ್ ವೈ. ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿದ ಘಟನೆ ಗುರುವಾರ ಮುಂಜಾನೆ ನಡೆದಿದೆ.
ಗುಂಡೇಟಿನಿಂದ ಗಾಯಗೊಂಡಿರುವ ಕೊಲೆ ಆರೋಪಿ ಕಿಶೋರ್ (28)ನನ್ನು ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ನಡೆಸಿದ ಹಲ್ಲೆಯಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿ ಗಣೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರದ ಮಿಳಘಟ್ಟ ನಿವಾಸಿ ಸುಶೀಲಮ್ಮ (65) ಅವರನ್ನು ಬುಧವಾರ ತಲೆಯ ಮೇಲೆ ಸೈಜುಗಲ್ಲು ಎತ್ತಿಹಾಕಿ ಅಮಾನುಷವಾಗಿ ಹತ್ಯೆಗೈದ ಬಳಿಕ ಆರೋಪಿ ಕಿಶೋರ್ ಪರಾರಿಯಾಗಿದ್ದ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಆರೋಪಿಯ ಪತ್ತೆಗೆ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು.
ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಾಜಪೇಯಿ ಲೇಔಟ್‌ನಲ್ಲಿ ಆರೋಪಿ ಅಡಗಿರುವ ಖಚಿತ ಮಾಹಿತಿ ಮೇರೆಗೆ ಸಿಪಿಐ ಸತ್ಯನಾರಾಯಣ್ ವೈ. ಅವರ ನೇತೃತ್ವದ ಪೊಲೀಸ್ ತಂಡ ಮುಂಜಾನೆ ದಾಳಿ ನಡೆಸಿತ್ತು. ಬಂಧನಕ್ಕೆ ಮುಂದಾದ ಕ್ಷಣದಲ್ಲೇ ಆರೋಪಿ ಲಾಂಗ್ ಬೀಸಿ ಪೊಲೀಸ್ ಸಿಬ್ಬಂದಿ ಗಣೇಶ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ.
ಪರಿಸ್ಥಿತಿ ನಿಯಂತ್ರಣ ಮೀರಿ ಜೀವಾಪಾಯದ ಸ್ಥಿತಿ ನಿರ್ಮಾಣವಾಗುತ್ತಿದ್ದಂತೆ ಸಿಪಿಐ ಸತ್ಯನಾರಾಯಣ್ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರು. ಆದರೂ ಆರೋಪಿ ಶರಣಾಗದ ಹಿನ್ನೆಲೆಯಲ್ಲಿ ಆತ್ಮರಕ್ಷಣೆ ಹಾಗೂ ಪೊಲೀಸ್ ಸಿಬ್ಬಂದಿಯ ಜೀವ ರಕ್ಷಿಸುವ ಉದ್ದೇಶದಿಂದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದರು.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಅವರು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ಪ್ರಕರಣದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ನಗರದಲ್ಲಿ ಸಂಚಲನ ಸೃಷ್ಟಿಸಿದ್ದ ವೃದ್ಧೆಯ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಯಶಸ್ವಿಯಾಗಿ ವಶಕ್ಕೆ ಪಡೆದಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
