ಶಿವಮೊಗ್ಗ, : ವಿದ್ಯಾರ್ಥಿಗಳ ಬದುಕನ್ನು ಹಾಳುಮಾಡುತ್ತಿರುವ ಮಾದಕ ವ್ಯಸನದಂತಹ ಸಾಮಾಜಿಕ ಪಿಡುಗನ್ನು ತಡೆಯಲು ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಪರಿಣಾಮಕಾರಿ ಕಾರ್ಯಾಚರಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು
ಜಿಲ್ಲಾಡಳಿತ ಕಚೇರಿಯಲ್ಲಿ ನಡೆದ ಜಿಲ್ಲಾಮಟ್ಟದ ನಾರ್ಕೋ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದ ಅಂಗವಾಗಿ ಶಾಲೆ-ಕಾಲೇಜುಗಳು ಹಾಗೂ ವಿದ್ಯಾರ್ಥಿಗಳು ಹೆಚ್ಚಾಗಿ ಸೇರುವ ಪ್ರದೇಶಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ನಿರಂತರ ಜಾಗೃತಿ ಮೂಡಿಸಬೇಕು ಎಂದರು.
ಶಿಕ್ಷಣ ಇಲಾಖೆ ಪ್ರತಿ ತಿಂಗಳು ಮಕ್ಕಳ ಕ್ಲಬ್ಗಳ ಮೂಲಕ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ ವರದಿ ಸಲ್ಲಿಸಬೇಕು. ವಸತಿ ನಿಲಯಗಳ ವಾರ್ಡನ್ಗಳು ವಿದ್ಯಾರ್ಥಿಗಳಲ್ಲಿ ಸಿಗರೇಟ್, ಗುಟ್ಕಾ ಹಾಗೂ ಇತರ ಮಾದಕ ವಸ್ತುಗಳ ಬಳಕೆ ಕುರಿತು ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಸೂಚಿಸಿದರು.
ಆರೋಗ್ಯ ಇಲಾಖೆಯಲ್ಲಿ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಮಾದಕ ವಸ್ತು ಪತ್ತೆ ಪರೀಕ್ಷಾ ಕಿಟ್ಗಳು ಲಭ್ಯವಿದ್ದು, ವ್ಯಸನಮುಕ್ತಿ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯಲು ಮುಂದೆ ಬರುವವರಿಗೆ ಕಾನೂನಿನಡಿ ಅವಕಾಶವಿದೆ. ಆದ್ದರಿಂದ ಡಿ-ಅಡಿಕ್ಷನ್ ಕೇಂದ್ರಗಳನ್ನು ಮತ್ತಷ್ಟು ಬಲಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಬಕಾರಿ ಇಲಾಖೆ ಅಕ್ರಮ ಮದ್ಯ ಮಾರಾಟವನ್ನು ಕಟ್ಟುನಿಟ್ಟಾಗಿ ತಡೆಯಬೇಕು. ಕೃಷಿ ಇಲಾಖೆ ಬೆಳೆ ಸಮೀಕ್ಷೆ ಹಾಗೂ ರೈತರ ಸಭೆಗಳಲ್ಲಿ ಜಾಗೃತಿ ಮೂಡಿಸಬೇಕು. ಅರಣ್ಯ ಇಲಾಖೆ ಅಕ್ರಮ ಗಾಂಜಾ ಬೆಳೆ ಕುರಿತು ನಿಗಾ ವಹಿಸಿ ಪೊಲೀಸ್ ಇಲಾಖೆಯೊಂದಿಗೆ ಮಾಹಿತಿ ಹಂಚಿಕೊಳ್ಳಬೇಕು ಎಂದು ನಿರ್ದೇಶಿಸಿದರು.
ನಗರದ ಕಾಂಡಿಮೆಂಟ್ ಅಂಗಡಿಯೊಂದರಲ್ಲಿ ಆಯುರ್ವೇದ ಔಷಧಿ ಹೆಸರಿನಲ್ಲಿ ಮಾರಾಟವಾಗುತ್ತಿದ್ದ ಮಾತ್ರೆ ಪರೀಕ್ಷೆಯಲ್ಲಿ ನೋವು ನಿವಾರಕ ಔಷಧಿ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ, ಸಂಬಂಧಿಸಿದ ಅಂಗಡಿಯ ವಿರುದ್ಧ ಕ್ರಮ ಕೈಗೊಂಡು ಅಗತ್ಯವಿದ್ದರೆ ವ್ಯಾಪಾರ ಪರವಾನಗಿ ರದ್ದುಪಡಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಾರಿಯಪ್ಪ ಮಾತನಾಡಿ, ಅಬಕಾರಿ, ಅರಣ್ಯ, ಶಿಕ್ಷಣ, ಆರೋಗ್ಯ ಹಾಗೂ ಪೊಲೀಸ್ ಇಲಾಖೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮಾದಕ ದ್ರವ್ಯಗಳ ಜಾಲವನ್ನು ನಿಯಂತ್ರಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ. ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
