ಶಿವಮೊಗ್ಗ: ಮಳೆಗಾಲ ಆರಂಭವಾದರೂ ಸಮರ್ಪಕ ಮಳೆಯಾಗದೆ ಸಂಕಷ್ಟದಲ್ಲಿರುವ ರೈತರಿಗೆ ಇದೀಗ ಪಂಪ್‌ಸೆಟ್‌ಗಳ ವಿದ್ಯುತ್ ಕೇಬಲ್ ಕಳ್ಳತನ ಮತ್ತೊಂದು ಹೊಡೆತ ನೀಡಿದೆ. ಕೂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಾಪುರ, ಜಾವಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪಂಪ್‌ಸೆಟ್‌ಗಳಿಗೆ ಅಳವಡಿಸಿದ್ದ ಬೆಲೆಬಾಳುವ ತಾಮ್ರದ ವಿದ್ಯುತ್ ಕೇಬಲ್‌ಗಳನ್ನು ಕಿಡಿಗೇಡಿಗಳು ಕಳವು ಮಾಡಿರುವುದರಿಂದ ರೈತರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.
ತುಂಗಾ ನದಿ ದಂಡೆಯ ಸಮೀಪ ನೀರಾವರಿಗಾಗಿ ಅಳವಡಿಸಲಾಗಿದ್ದ ಸುಮಾರು ೪೦ಕ್ಕೂ ಹೆಚ್ಚು ಪಂಪ್‌ಸೆಟ್‌ಗಳ ಮೋಟಾರ್ ಮನೆಗಳ ಬೀಗ ಒಡೆದು, ಅವುಗಳಿಗೆ ಸಂಪರ್ಕಿಸಲಾಗಿದ್ದ ಕಾಪರ್ ಕೇಬಲ್‌ಗಳನ್ನು ದುಷ್ಕರ್ಮಿಗಳು ಕಳವು ಮಾಡಿದ್ದಾರೆ. ಇದರಿಂದ ಬೆಳೆಗಳಿಗೆ ನೀರುಣಿಸುವ ಕಾರ್ಯಕ್ಕೆ ತೊಂದರೆಯಾಗಿದ್ದು, ರೈತರಲ್ಲಿ ತೀವ್ರ ಆತಂಕ ಮನೆ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಪಂಪ್‌ಸೆಟ್, ಮೋಟಾರ್ ಹಾಗೂ ವಿದ್ಯುತ್ ಕೇಬಲ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದು ರೈತರನ್ನು ಮತ್ತಷ್ಟು ಚಿಂತೆಗೆ ದೂಡಿದೆ. ಈ ಘಟನೆಯಲ್ಲಿ ಸುಮಾರು ೩ ಲಕ್ಷ ರೂ. ಮೌಲ್ಯದ ೪೦ಕ್ಕೂ ಹೆಚ್ಚು ವಿದ್ಯುತ್ ಕೇಬಲ್‌ಗಳನ್ನು ಕಳವು ಮಾಡಲಾಗಿದೆ ಎಂದು ರೈತರು ತಿಳಿಸಿದ್ದಾರೆ.
ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪ್ರಕರಣದ ತನಿಖೆ ಆರಂಭಿಸಲಾಗಿದೆ.
