ಶಿವಮೊಗ್ಗ : ಸಂಸದ ಬಿ.ವೈ. ರಾಘವೇಂದ್ರ ಅವರ ಏಕವಚನ ಹಾಗೂ ವೀರಾಪಲಾಪದ ಮಾತುಗಳಿಗೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನೇರ ಸವಾಲು ಹಾಕಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು,
ಸಚಿವ ಮಧು ಬಂಗಾರಪ್ಪ ಅವರ ವಿರುದ್ಧ ರಾಘವೇಂದ್ರ ಏಕವಚನ ಬಳಸಿ ಮಾತನಾಡಿರುವುದನ್ನು ತೀವ್ರವಾಗಿ ಖಂಡಿಸಿದ ಅವರು, “ಮಧು ಬಂಗಾರಪ್ಪ ವಿರುದ್ಧ ವೀರ ಕಂಠೀರವ, ಶಿಕಾರಿಪುರದ ಶೂರರ ರೀತಿಯಲ್ಲಿ ಮಾತನಾಡಿದ್ದಾರೆ. ನಿಮ್ಮನ್ನು ಮತ್ತು ನಿಮ್ಮ ತಮ್ಮನನ್ನು ನಾನು ಹತ್ತಿರದಿಂದ ನೋಡಿ ಬಂದಿದ್ದೇನೆ. ನನಗೂ ಏಕವಚನದಲ್ಲಿ ಮಾತನಾಡಲು ಬರುತ್ತದೆ, ನಾನು ಶುರು ಮಾಡಿದರೆ ನೀನು ಗಾಳಿಗೆ ತೂರಿ ಹೋಗುತ್ತೀಯಾ” ಎಂದು ವಾಗ್ದಾಳಿ ನಡೆಸಿದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ಮಾತನಾಡಿದ ಬೇಳೂರು, “ಯಡಿಯೂರಪ್ಪ ಅವರ ಬಗ್ಗೆ ನನಗೆ ಅಪಾರ ಗೌರವವಿದೆ ಮತ್ತು ಅವರಿಗೆ ಆ ಗೌರವವನ್ನು ಸದಾ ಕೊಡುತ್ತೇನೆ. ಆದರೆ ಪಕ್ಷದ ವಿಚಾರ ಬಂದಾಗ ಅವರ ವಿರುದ್ಧ ಮಾತನಾಡಲೇಬೇಕಾಗುತ್ತದೆ,ಹಾಗಂತ ಎಲ್ಲೂ ಅವರ ವಿರುದ್ಧ ಏಕವಚನ ಬಳಸುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ಬಿ.ವೈ.ರಾಘವೇಂದ್ರ ಅವರಿಗೆ ಸವಾಲು ಎಸೆದ ಬೇಳೂರು ಗೋಪಾಲಕೃಷ್ಣ, “ಇತರರಿಗೆ ಚಾಲೆಂಜ್ ಮಾಡುವ ಮುನ್ನ ಮುಂದಿನ ಚುನಾವಣೆಯಲ್ಲಿ ಶಿಕಾರಿಪುರದಲ್ಲಿ ತಾವು ಗೆಲ್ಲುವುದನ್ನು ನೋಡಿಕೊಳ್ಳಲಿ. ಕಳೆದ ಚುನಾವಣೆಯಲ್ಲಿ ಕುಮಾರ್ ಬಂಗಾರಪ್ಪ ಅವರಿಗೆ ಶಿಕಾರಿಪುರದಲ್ಲಿ ಟಿಕೆಟ್ ನೀಡಿದ್ದರೆ, ವಿಜಯೇಂದ್ರ ಹಾರಿ ಹೋಗುತ್ತಿದ್ದರು” ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ಗೆ ಯಾರು ಬಂದರೂ ಸ್ವಾಗತ
ಪಕ್ಷದ ಸೇರ್ಪಡೆ ಕುರಿತು ಮಾತನಾಡಿದ ಅವರು, “ಕಾಂಗ್ರೆಸ್ ಪಕ್ಷ ಯಾರದ್ದೇ ವೈಯಕ್ತಿಕ ಸ್ವತ್ತಲ್ಲ. ಪಕ್ಷದ ಸಿದ್ಧಾಂತ ಒಪ್ಪಿ ಯಾರು ಬಂದರೂ ಸ್ವಾಗತವಿದೆ. ಯಾರನ್ನೂ ಬೇಡ ಎನ್ನಲು ಯಾರಿಗೂ ಅಧಿಕಾರವಿಲ್ಲ” ಎಂದರು.
ಬಿಜೆಪಿಯ ಬಳ್ಳಾರಿ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ನಿಂದ ಬೃಹತ್ ಹೋರಾಟ ರೂಪಿಸಲು ತೀರ್ಮಾನಿಸಲಾಗಿದೆ. “ಶಿಕಾರಿಪುರದಿಂದಲೇ ‘ಭಾರತ್ ಜೋಡೋ’ ಮಾದರಿಯ ಬೃಹತ್ ಪಾದಯಾತ್ರೆ ಹಾಗೂ ಹೋರಾಟವನ್ನು ಆರಂಭಿಸಿ ಬಿಜೆಪಿಗೆ ತಕ್ಕ ಪ್ರತ್ಯುತ್ತರ ನೀಡಲಾಗುವುದು” ಎಂದು ಎಚ್ಚರಿಸಿದರು.
ಕಾಂಗ್ರೆಸ್ ಮುಖಂಡ ಹೆಚ್.ಎಸ್. ಸುಂದರೇಶ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಬೇಳೂರು, “ಅಧಿಕಾರ ಇಲ್ಲದ ಕಾರಣ ಹಾಗೂ ಜಿಲ್ಲಾಧ್ಯಕ್ಷ ಸ್ಥಾನ ಸಿಗಲಿಲ್ಲ ಎಂಬ ಬೇಸರದಿಂದ ಸುಂದರೇಶ್ ಈ ರೀತಿ ಮಾತನಾಡಿರಬಹುದು. ಅವರ ಆರೋಗ್ಯದಲ್ಲೂ ಏರುಪೇರಾಗಿದೆ. ಏನೇ ಇದ್ದರೂ ಯಾರೂ ಕೂಡ ನೇರವಾಗಿ ಪಕ್ಷದ ವಿರುದ್ಧ ಮಾತನಾಡಬಾರದು” ಎಂದು ಕಿವಿಮಾತು ಹೇಳಿದರು.
