ಬೆಂಗಳೂರು: ರಾಜ್ಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಮಹತ್ವದ ಶಿಕ್ಷಣ ಸುಧಾರಣೆಗಳನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಪ್ರಕಟಿಸಿದ್ದಾರೆ.
ವಿಧಾನಸಭಾ ಅಧಿವೇಶನದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ಮುಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತೃತೀಯ ಭಾಷೆಯನ್ನು ಗ್ರೇಡಿಂಗ್ ವ್ಯವಸ್ಥೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದರು. ಈವರೆಗೆ 625 ಅಂಕಗಳಲ್ಲಿ ತೃತೀಯ ಭಾಷೆಗೆ 100 ಅಂಕಗಳನ್ನು ನಿಗದಿಪಡಿಸಲಾಗುತ್ತಿತ್ತು. ಆದರೆ ಹೊಸ ವ್ಯವಸ್ಥೆಯಲ್ಲಿ ತೃತೀಯ ಭಾಷೆಯಲ್ಲಿ ಪಾಸ್ ಅಥವಾ ಫೇಲ್ ಎಂಬ ಪದ್ಧತಿ ಇರುವುದಿಲ್ಲ. ಅಂತಿಮ ಫಲಿತಾಂಶದ ಅಂಕಗಳಲ್ಲಿ ತೃತೀಯ ಭಾಷೆಯ ಅಂಕಗಳನ್ನು ಪರಿಗಣಿಸಲಾಗುವುದಿಲ್ಲ. ಬದಲಿಗೆ ಎ, ಬಿ, ಸಿ, ಡಿ ಮಾದರಿಯ ಗ್ರೇಡ್ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಹಿಂದಿ, ಸಂಸ್ಕೃತ, ತುಳು, ಮರಾಠಿ, ಅರೇಬಿಕ್ ಸೇರಿದಂತೆ ಎಲ್ಲಾ ತೃತೀಯ ಭಾಷೆಗಳಿಗೂ ಈ ನಿಯಮ ಅನ್ವಯವಾಗಲಿದೆ. ಈ ಸಂಬಂಧ ಅಧಿಕೃತ ಆದೇಶವನ್ನು ಶೀಘ್ರದಲ್ಲೇ ಹೊರಡಿಸಲಾಗುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ‘ನೈತಿಕ ಶಿಕ್ಷಣ’ ವಿಷಯವನ್ನು ಜಾರಿಗೊಳಿಸಲಾಗಿದ್ದು, ಸರ್ಕಾರದಿಂದ ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಸಮಾಜಕ್ಕೆ ಉತ್ತಮ ನಾಗರಿಕರನ್ನು ರೂಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.
ಇದೇ ವೇಳೆ, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯನ್ನು ನಿಯಂತ್ರಿಸುವ ಕುರಿತು ಸದನದಲ್ಲಿ ಚರ್ಚೆ ನಡೆದಿದ್ದು, ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಮಕ್ಕಳ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಪೋಷಕರು ಮೊಬೈಲ್ ಬಳಕೆಯ ಮೇಲೆ ಹೆಚ್ಚಿನ ಗಮನಹರಿಸಬೇಕು ಎಂದು ಮನವಿ ಮಾಡಿದರು.
ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡಲು ಈಗಾಗಲೇ ಜಾರಿಯಲ್ಲಿರುವ ವರ್ಷಕ್ಕೆ ಮೂರು ಪರೀಕ್ಷೆಗಳ ವ್ಯವಸ್ಥೆಯನ್ನು ಮುಂದುವರಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಉತ್ತಮ ಅಂಕಗಳನ್ನು ಕಾಯ್ದುಕೊಳ್ಳಲು ಮತ್ತಷ್ಟು ಅವಕಾಶ ಸಿಗಲಿದೆ ಎಂದರು.

