ಅನುದಾನ ಖಚಿತವಾದ ಬಳಿಕವೇ ಟೆಂಡರ್ ಕರೆಯಿರಿ; ಕೆಎನ್ಎನ್ಎಲ್ನಲ್ಲಿ ಸರಳ ಪಾವತಿ ವ್ಯವಸ್ಥೆಗೆ ಒತ್ತಾಯ
ಶಿವಮೊಗ್ಗ: ರಾಜ್ಯ ಸರ್ಕಾರವು ವಿವಿಧ ಇಲಾಖೆಗಳು ಮತ್ತು ನಿಗಮಗಳಿಗೆ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಗಾಗಿ ಅನುದಾನ ಬಿಡುಗಡೆ ಮಾಡಿದ್ದರೂ, ಅನೇಕ ಗುತ್ತಿಗೆದಾರರಿಗೆ ಇನ್ನೂ ಹಣ ಪಾವತಿಯಾಗಿಲ್ಲ. ಇದರಿಂದ ಗುತ್ತಿಗೆದಾರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಕಾರ್ಮಿಕರ ವೇತನ, ಸಾಮಗ್ರಿಗಳ ಖರೀದಿ ಹಾಗೂ ಬ್ಯಾಂಕ್ ಸಾಲ ಮರುಪಾವತಿಗೆ ತೊಂದರೆ ಅನುಭವಿಸುವಂತಾಗಿದೆ ಎಂದು ಮಲೆನಾಡು ಗುತ್ತಿಗೆದಾರರ ಸಂಘದ (ರಿ.) ಅಧ್ಯಕ್ಷ ಜಿ.ಎಂ. ಜಗದೀಶ್ ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಹಬ್ಬದ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ ವೇತನ ಮತ್ತು ಬೋನಸ್ ಪಾವತಿಸುವುದು ಗುತ್ತಿಗೆದಾರರ ಜವಾಬ್ದಾರಿಯಾಗಿದೆ. ಆದರೆ, ಕಾಮಗಾರಿಗಳನ್ನು ಪೂರ್ಣಗೊಳಿಸಿ ಬಿಲ್ ಸಲ್ಲಿಸಿದ್ದರೂ ಹಣ ಬಿಡುಗಡೆಯಾಗದ ಕಾರಣ ಕಾರ್ಮಿಕರಿಗೆ ಸಕಾಲದಲ್ಲಿ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಈಗಾಗಲೇ ಅನುದಾನ ಬಿಡುಗಡೆ ಮಾಡಿರುವ ಕಾಮಗಾರಿಗಳಿಗೆ ಸಂಬಂಧಿಸಿದ ಬಾಕಿ ಬಿಲ್ಗಳನ್ನು ಮುಂದಿನ ಒಂದು ಅಥವಾ ಎರಡು ದಿನಗಳೊಳಗೆ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿಗಳು, ಸಂಬಂಧಪಟ್ಟ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಗುತ್ತಿಗೆದಾರರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳಬೇಕು. ಈಗಾಗಲೇ ಅನುದಾನ ಬಿಡುಗಡೆಯಾಗಿರುವ ಕಾಮಗಾರಿಗಳ ಬಾಕಿ ಬಿಲ್ಗಳನ್ನು ತಕ್ಷಣ ಪಾವತಿಸುವ ಮೂಲಕ ದಸರಾ ಹಬ್ಬದ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ ವೇತನ ಮತ್ತು ಬೋನಸ್ ನೀಡಲು ಅನುಕೂಲ ಕಲ್ಪಿಸಬೇಕು.ಸರ್ಕಾರದ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸುವ ಗುತ್ತಿಗೆದಾರರು ತಾವು ಮಾಡಿದ ಕೆಲಸದ ಹಣಕ್ಕಾಗಿ ತಿಂಗಳುಗಟ್ಟಲೆ ಕಾಯುವ ಪರಿಸ್ಥಿತಿಗೆ ಅಂತ್ಯ ಹಾಡಬೇಕು. ಅನುದಾನ ಖಚಿತವಾದ ನಂತರವೇ ಟೆಂಡರ್ ಆಹ್ವಾನಿಸಿ, ಕಾಮಗಾರಿ ಪೂರ್ಣಗೊಂಡ ತಕ್ಷಣ ನಿಗದಿತ ಕಾಲಮಿತಿಯಲ್ಲಿ ಹಣ ಪಾವತಿಸುವ ವ್ಯವಸ್ಥೆ ಜಾರಿಗೊಳಿಸಬೇಕು. ಗುತ್ತಿಗೆದಾರರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವುದರ ಜತೆಗೆ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಲು ಸರ್ಕಾರ ತಕ್ಷಣ ಕಾರ್ಯಪ್ರವೃತ್ತವಾಗಬೇಕು
: ಜಿ.ಎಂ. ಜಗದೀಶ್ ಅಧ್ಯಕ್ಷರು. ಮಲೆನಾಡು ಗುತ್ತಿಗೆದಾರರ ಸಂಘದ (ರಿ.)
ಕರ್ನಾಟಕ ನೀರಾವರಿ ನಿಗಮದಲ್ಲಿ (ಕೆಎನ್ಎನ್ಎಲ್) ಗುತ್ತಿಗೆದಾರರ ಬಿಲ್ಗಳು ಪಾವತಿಗೆ ಶಿಫಾರಸಾಗುವ ಮೊದಲು ಸುಮಾರು ೩೦ರಿಂದ ೩೫ ಹಂತಗಳನ್ನು ದಾಟಬೇಕಾಗಿದೆ. ಇದರಿಂದ ಬಿಲ್ ವಿಲೇವಾರಿಯಲ್ಲಿ ವಿಳಂಬವಾಗುತ್ತಿದೆ. ಲೋಕೋಪಯೋಗಿ ಇಲಾಖೆಯಲ್ಲಿ (ಪಿಡಬ್ಲ್ಯುಡಿ) ಇರುವಂತೆ ಸರಳ, ಪಾರದರ್ಶಕ ಮತ್ತು ತ್ವರಿತ ಪಾವತಿ ವ್ಯವಸ್ಥೆಯನ್ನು ಕೆಎನ್ಎನ್ಎಲ್ನಲ್ಲಿಯೂ ಜಾರಿಗೆ ತರಬೇಕು. ಅನಗತ್ಯ ಕಡತ ಚಲಾವಣೆ ಹಾಗೂ ವಿಳಂಬಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಿದ ಬಳಿಕ ಅಳತೆ ಪುಸ್ತಕ (ಎಂಬಿ), ಬಿಲ್ ಪರಿಶೀಲನೆ ಮತ್ತು ಇತರ ಅಗತ್ಯ ದಾಖಲೆಗಳ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ನಿಗದಿತ ಕಾಲಮಿತಿಯೊಳಗೆ ಹಣ ಪಾವತಿಸಬೇಕು. ಅನುದಾನದ ಲಭ್ಯತೆ ಖಚಿತಪಡಿಸಿಕೊಳ್ಳದೆ ಟೆಂಡರ್ ಆಹ್ವಾನಿಸುವುದರಿಂದ ಗುತ್ತಿಗೆದಾರರು ಸಾಲ ಮಾಡಿ ಕಾಮಗಾರಿ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ, ಅನುದಾನ ಖಚಿತವಾದ ನಂತರವೇ ಟೆಂಡರ್ ಕರೆಯಬೇಕು ಎಂದು ಒತ್ತಾಯಿಸಿದರು.
ಪ್ಯಾಕೇಜ್ ಟೆಂಡರ್ಗಳ ಬದಲು ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆ ನೀಡಬೇಕು. ಕರ್ನಾಟಕ ನೀರಾವರಿ ನಿಗಮದಲ್ಲಿ ಗುತ್ತಿಗೆದಾರರ ಇಎಂಡಿ ಮತ್ತು ಎಫ್ಎಸ್ಡಿ ಠೇವಣಿ ಮೊತ್ತಗಳು ಐದರಿಂದ ಆರು ವರ್ಷಗಳಿಂದ ಬಾಕಿ ಉಳಿದಿರುವ ಬಗ್ಗೆಯೂ ಗಮನ ಹರಿಸಬೇಕು. ಈ ಮೊತ್ತವನ್ನು ಇತರ ಗುತ್ತಿಗೆದಾರರ ಬಿಲ್ ಪಾವತಿಗೆ ಬಳಸಲಾಗಿದೆ ಎಂಬ ಆರೋಪದ ಕುರಿತು ಪರಿಶೀಲನೆ ನಡೆಸಿ, ನಿಯಮಾನುಸಾರ ಠೇವಣಿ ಹಣವನ್ನು ಹಿಂದಿರುಗಿಸಬೇಕು ಎಂದು ಹೇಳಿದರು.
ಅಗತ್ಯ ದಾಖಲೆಗಳನ್ನು ಸಲ್ಲಿಸಿ ಬಿಲ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಅನಗತ್ಯವಾಗಿ ಪಾವತಿ ವಿಳಂಬ ಮಾಡುವ ಅಧಿಕಾರಿಗಳ ಹೊಣೆಗಾರಿಕೆ ನಿಗದಿಪಡಿಸಬೇಕು. ಅನ್ವಯಿಸುವ ಕಾನೂನು ಮತ್ತು ನಿಯಮಗಳ ಪ್ರಕಾರ ವಿಳಂಬ ಪಾವತಿಗೆ ಬಡ್ಡಿ ನೀಡುವ ವ್ಯವಸ್ಥೆಯನ್ನೂ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳು, ಸಂಬಂಧಪಟ್ಟ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಗುತ್ತಿಗೆದಾರರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಪರಿಹಾರ ಕಲ್ಪಿಸಬೇಕು. ಗುತ್ತಿಗೆದಾರರು ಸರ್ಕಾರದ ಅಭಿವೃದ್ಧಿ ಕಾಮಗಾರಿಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಮಾಡಿದ ಕೆಲಸದ ಹಣಕ್ಕಾಗಿ ತಿಂಗಳುಗಟ್ಟಲೆ ಕಾಯುವ ಪರಿಸ್ಥಿತಿ ಬದಲಾಗಬೇಕು. ಬಾಕಿ ಬಿಲ್ಗಳನ್ನು ಪಾವತಿಸಿ ಗುತ್ತಿಗೆದಾರರು ಕಾರ್ಮಿಕರಿಗೆ ವೇತನ ಮತ್ತು ಬೋನಸ್ ನೀಡಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಗೌರವ ಅಧ್ಯಕ್ಷರು ಕೆ. ಬಂಗಾರಪ್ಪ, ಪ್ರಭಾಕರ ಶೆಟ್ಟಿ. ಪ್ರಧಾನ ಕಾರ್ಯದರ್ಶಿ: ಉಮೇಶ್ ಎಚ್.ಸಿ.ಉಪಾಧ್ಯಕ್ಷರು: ದೇವೇಂದ್ರಪ್ಪ ಪಿ.ಎಸ್., ಬಿ.ಜಿ. ಜಗದೀಶ್, ಅರುಣ್ಕುಮಾರ್ ಕೆ.ಸಿ.ಸಹ ಕಾರ್ಯದರ್ಶಿಗಳು: ಶಕುಂತಲಾ ಟಿ., ಚಂದ್ರು ಜಿ.ಖಜಾಂಚಿ: ಎಸ್. ರಾಜೇಗೌಡ.ಸಂಘಟನಾ ಕಾರ್ಯದರ್ಶಿಗಳು: ಜಿ.ಎ. ಪ್ರಕಾಶ್, ಬಿ.ಎಸ್. ಗಿರೀಶ್. ಕಾರ್ಯಕಾರಿ ಸಮಿತಿ ಸದಸ್ಯರು: ಎಸ್. ಕಾಂತರಾಜ್, ಸಂತೋಷ್ಕುಮಾರ್ ಎಸ್.ಸಿ., ಅಶ್ವಿನಿ ಕುಮಾರ್ ಕೆ.ಕೆ.
