ಶಿವಮೊಗ್ಗ :
ಬೆಂಗಳೂರು-ಶಿವಮೊಗ್ಗ-ಬೆಂಗಳೂರು ವಿಮಾನ ಸೇವೆಯನ್ನು ಮೇ 1ರಿಂದ ಸ್ಥಗಿತಗೊಳಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಸೇವೆ ಮುಂದುವರಿಸಲು ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಒತ್ತಾಯಿಸಿದ್ದಾರೆ.
ಈ ಕುರಿತು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರಿಗೆ ಪತ್ರ ಬರೆದಿರುವ ಅವರು, ಈ ಮಾರ್ಗವು ಮಲೆನಾಡು ಭಾಗದ ಜನರಿಗೆ ಪ್ರಮುಖ ವಾಯು ಸಂಪರ್ಕವಾಗಿದ್ದು, ಸೇವೆ ನಿಲ್ಲಿಸಿದರೆ ಲಕ್ಷಾಂತರ ಜನರಿಗೆ ತೊಂದರೆ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣವು ಸುಮಾರು 450 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಕಳೆದ ಎರಡು ವರ್ಷಗಳಲ್ಲಿ 2400ಕ್ಕೂ ಹೆಚ್ಚು ವಿಮಾನ ಸಂಚಾರಗಳನ್ನು ನಿರ್ವಹಿಸಿ, 1 ಲಕ್ಷಕ್ಕೂ ಅಧಿಕ ಪ್ರಯಾಣಿಕರಿಗೆ ಸೇವೆ ನೀಡಿದೆ. ಇದು ಯೋಜನೆಯ ಯಶಸ್ಸನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಆದರೆ ಪೈಲಟ್ ಕೊರತೆ ಹಾಗೂ ನವೀಕರಿಸದ ಒಪ್ಪಂದದ ಹಿನ್ನೆಲೆಯಲ್ಲಿ ಇಂಡಿಗೋ ಸಂಸ್ಥೆ ಈ ಸೇವೆಯನ್ನು ಸ್ಥಗಿತಗೊಳಿಸಲು ಮುಂದಾಗಿದೆ. ಆ.31-2025ರಲ್ಲಿ ಮುಕ್ತಾಯವಾದ ಒಪ್ಪಂದದ ನಂತರವೂ ಆರು ತಿಂಗಳು ಸೇವೆ ಮುಂದುವರಿದಿದೆ. ಈಗ ಹೊಸ ಒಪ್ಪಂದದ ಅಗತ್ಯವಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಇಂಡಿಗೋ ಸಂಸ್ಥೆಯೊಂದಿಗೆ ತಕ್ಷಣ ಮಾತುಕತೆ ನಡೆಸಿ, ಕನಿಷ್ಠ ಎರಡು ವರ್ಷಗಳ ಕಾಲ ಸೇವೆ ಮುಂದುವರಿಸುವಂತೆ ಒಪ್ಪಂದ ನವೀಕರಿಸಬೇಕು. ಅಗತ್ಯವಿದ್ದರೆ ಬದಲಿ ಏರ್‌ಲೈನ್‌ಗಳನ್ನು ನಿಯೋಜಿಸುವುದನ್ನೂ ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.
ಸಂಸದರ 5 ಪ್ರಮುಖ ಮನವಿಗಳು :
* ಇಂಡಿಗೋ ಸಂಸ್ಥೆಯೊಂದಿಗೆ ತಕ್ಷಣ ಮಾತುಕತೆ ನಡೆಸುವುದು
* ಹೊಸ ಹಣಕಾಸು ಬೆಂಬಲದ ಒಪ್ಪಂದ ರೂಪಿಸುವುದು
* ಕನಿಷ್ಠ ೨ ವರ್ಷಗಳ ಕಾಲ ಸೇವೆ ಮುಂದುವರಿಸುವುದು
* ಬದಲಿ ಏರ್‌ಲೈನ್‌ಗಳನ್ನು ನಿಯೋಜಿಸಲು ಸಿದ್ಧತೆ
* ಉಡಾನ್ ಯೋಜನೆಯಡಿ ನೆರವು ಪರಿಶೀಲನೆಈ ವಿಮಾನ ನಿಲ್ದಾಣ ೪೫೦ ಕೋಟಿ ವೆಚ್ಚದಲ್ಲಿ ನಿರ್ಮಾಣ ೨,೪೦೦ಕ್ಕೂ ಹೆಚ್ಚು ವಿಮಾನ ಸಂಚಾರ ಜೊತೆ ೧ ಲಕ್ಷಕ್ಕೂ ಅಧಿಕ ಪ್ರಯಾಣಿಕರಿಗೆ ಸೇವೆ ನೀಡುತ್ತಿದೆ. ಮಲೆನಾಡು ಭಾಗಕ್ಕೆ ಪ್ರಮುಖ ವಾಯು ಸಂಪರ್ಕ ಇದ್ದಾಗಿದ್ದು, ಕೈಗಾರಿಕೆ, ಇದು ಮಲೆನಾಡು ಪ್ರವಾಸೋದ್ಯಮಕ್ಕೆ ಬಲವಾಗಿದೆ
: ಬಿ.ವೈ.ರಾಘವೇಂದ್ರ ಸಂಸದ.
