ಶಿವಮೊಗ್ಗ: ತಾವರೆಕೊಪ್ಪ ಹುಲಿ-ಸಿಂಹ ಧಾಮದಲ್ಲಿ ನಡೆದ ದುರಂತ ಘಟನೆಯಲ್ಲಿ ವನ್ಯಜೀವಿ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ (೨೬) ಅವರು ನೀರಾನೆ ದಾಳಿಗೆ ಒಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
ಮೂಲತಃ ಬೆಂಗಳೂರು ನಗರದ ಬನ್ನೇರುಘಟ್ಟ ನಿವಾಸಿಯಾದ ಸಮೀಕ್ಷಾ ರೆಡ್ಡಿ, ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದಿದ್ದರು.
ಅವರು ಕೇವಲ ಒಂದೂವರೆ ತಿಂಗಳ ಹಿಂದಷ್ಟೇ ತಾವರೆಕೊಪ್ಪ ಮೃಗಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ತರಬೇತಿ ಪಡೆಯುತ್ತಿದ್ದರು.
ಗುರುವಾರ ರಾತ್ರಿ ಸುಮಾರು ೧೧.೩೦ರ ಸುಮಾರಿಗೆ ಮೃಗಾಲಯದ ಆಸ್ಪತ್ರೆಗೆ ತೆರಳಿ ಹಕ್ಕಿಯೊಂದಕ್ಕೆ ಚಿಕಿತ್ಸೆ ನೀಡಿದ ನಂತರ, ಗರ್ಭಿಣಿಯಾಗಿದ್ದ ನೀರಾನೆ ಇರುವ ಆವರಣಕ್ಕೆ ತೆರಳಿದರು. ಥರ್ಮಲ್ ಕ್ಯಾಮೆರಾ ಬಳಸಿ ಅದರ ಆರೋಗ್ಯ ಸ್ಥಿತಿ ಪರಿಶೀಲಿಸುವಾಗ, ಆ ನೀರಾನೆ ಏಕಾಏಕಿ ದಾಳಿ ನಡೆಸಿ ಅವರಿಗೆ ಗಂಭೀರ ಗಾಯಗಳಾಗಿವೆ.
ತಕ್ಷಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಸ್ತ್ರಚಿಕಿತ್ಸೆಯನ್ನೂ ನಡೆಸಲಾಯಿತು. ಆದರೆ ತೀವ್ರ ರಕ್ತಸ್ರಾವದಿಂದಾಗಿ ಅವರು ಚಿಕಿತ್ಸೆಗೂ ಸ್ಪಂದಿಸದೆ ಬೆಳಿಗ್ಗೆ ಸುಮಾರು ೬.೩೦ರ ಸುಮಾರಿಗೆ ನಿಧನರಾದರು.
ದಾಳಿ ನಡೆಸಿದ ನೀರಾನೆ ಗರ್ಭಿಣಿಯಾಗಿದ್ದು, ಇನ್ನೂ ನಾಲ್ಕು ದಿನಗಳಲ್ಲಿ ಹೆರಿಗೆಗಾಗಬೇಕಿತ್ತು. ಅದು ಆಹಾರ ಸೇವಿಸದ ಹಿನ್ನೆಲೆ ಆರೋಗ್ಯ ಪರಿಶೀಲನೆಗಾಗಿ ಡಾ. ಸಮೀಕ್ಷಾ ಅವರು ಆವರಣಕ್ಕೆ ತೆರಳಿದ್ದಾಗ ಈ ದುರ್ಘಟನೆ ನಡೆದಿದೆ.
ಈ ಘಟನೆಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡುವಂತೆ ಸೂಚಿಸಿದ್ದು, ಮೃಗಾಲಯಗಳಲ್ಲಿ ಪಶುವೈದ್ಯರು ಚಿಕಿತ್ಸೆ ನೀಡುವ ವೇಳೆ ಕಟ್ಟುನಿಟ್ಟಾದ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕೆಂದು ಆದೇಶಿಸಿದ್ದಾರೆ.
ದುರಂತ ಸಂಭವಿಸಲು ಕಾರಣವಾದ ಸುರಕ್ಷತಾ ಲೋಪಗಳ ಕುರಿತು ಸಮಗ್ರ ತನಿಖೆ ನಡೆಸಿ, ಏಳು ದಿನಗಳ ಒಳಗೆ ವರದಿ ಸಲ್ಲಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಶಿವಮೊಗ್ಗ ತಾವರೆಕೊಪ್ಪ ಮೃಗಾಲಯದಲ್ಲಿ ವನ್ಯಜೀವಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ನೀರಾನೆ ದಾಳಿಯಿಂದ ಯುವ ಪಶುವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ, ತಮ್ಮ ವೃತ್ತಿ ಬದುಕನ್ನು ವನ್ಯಜೀವಿಗಳ ಸೇವೆಗೆ ಮುಡಿಪಾಗಿಟ್ಟ ಯುವ ವೈದ್ಯಯನ್ನು ಕಳೆದುಕೊಂಡಿರುವುದು ಕೇವಲ ಅವರ ಕುಟುಂಬ ಮತ್ತು ಇಲಾಖೆಗೆ ನಷ್ಟವಲ್ಲದೆ ಇಡೀ ಸಮಾಜಕ್ಕೆ ಆದ ನಷ್ಟ, ಇಂತಹ ಸಂದರ್ಭದಲ್ಲಿ ಅವರ ಕುಟುಂಬದೊಂದಿಗೆ ಸರ್ಕಾರ ನಿಲ್ಲಲಿದ್ದು, ಈಗಾಗಲೇ ಅರಣ್ಯ ಸಚಿವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಈ ಸಂದರ್ಭದಲ್ಲಿ ದೇವರು ಅವರ ಅಗಲಿಕೆಯನ್ನು ಬರಿಸುವ ಶಕ್ತಿ ಕುಟುಂಬ ವರ್ಗಕ್ಕೆ ಹಾಗೂ ಅವರ ಸಹಪಾಠಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
: ಎಸ್, ಮಧು ಬಂಗಾರಪ್ಪ
ಜಿಲ್ಲಾ ಉಸ್ತುವಾರಿ ಸಚಿವರು, ಶಿವಮೊಗ್ಗ.
ಪಶು ವೈದ್ಯೆ ಡಾ.ಸಮೀಕ್ಷಾರೆಡ್ಡಿ ಸಾವು ಜಿಲ್ಲೆಗೆ ತುಂಬಲಾರದ ನಷ್ಟವಾಗಿದ್ದು, ಅವರ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ.
: ಎಸ್.ಎನ್. ಚನ್ನಬಸಪ್ಪ, ಶಾಸಕರು.
ಕಳೆದ ಮೂರ್ನಾಲ್ಕು ದಿನಗಳಿಂದ ನೀರಾನೆಯು ನೀರಿನಲ್ಲಿಯೇ ಕುಳಿತಿತ್ತು.ಗುರುವಾರ ರಾತ್ರಿ ಡಾ. ಸಮೀಕ್ಷಾ ಅವರು ಪಕ್ಷಿಯೊಂದಕ್ಕೆ ಚಿಕಿತ್ಸೆ ನೀಡಲು ಮೃಗಾಲಯಕ್ಕೆ ಬಂದಿದ್ದರು. ಆ ಸಮಯದಲ್ಲಿ ನೀರಾನೆಯ ದೇಹದ ಉಷ್ಣಾಂಶವನ್ನು ಪರೀಕ್ಷಿಸಲು ಮುಂದಾದಾಗ ಈ ದುರ್ಘಟನೆ ಸಂಭವಿಸಿದೆ.ಮೃತ ಡಾ. ಸಮೀಕ್ಷಾ ಅವರು ಫೆಬ್ರವರಿ ೧ರಂದು ಟ್ರೈನಿ ವೈದ್ಯೆಯಾಗಿ ಮೃಗಾಲಯಕ್ಕೆ ಸೇರ್ಪಡೆಗೊಂಡಿದ್ದರು. ರಾತ್ರಿ ವೇಳೆ ನೀರಾನೆ ಬಳಿ ಹೋಗುವಾಗ ಅಲ್ಲಿದ್ದ ಹಿರಿಯ ಪಶುವೈದ್ಯಾಧಿಕಾರಿಗಳು ಅವರಿಗೆ ಯಾವ ಸೂಚನೆ ನೀಡಿದ್ದರು ಎಂಬುದು ನಮಗೆ ತಿಳಿದಿರಲಿಲ್ಲ. ಈ ಬಗ್ಗೆ ನಾವು ಆಂತರಿಕವಾಗಿ ಚರ್ಚೆ ನಡೆಸುತ್ತೇವೆ ಮತ್ತು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ.
: ಅಮರಾಕ್ಷರ್,
ಕಾರ್ಯನಿರ್ವಾಹಕ ನಿರ್ದೇಶಕರು,ಹುಲಿ-ಸಿಂಹಧಾಮ,ತ್ಯಾವರೆಕೊಪ್ಪ
ಡಾ. ಸಮೀಕ್ಷಾ ಅವರು ಫೆಬ್ರವರಿ ೧ರಂದು ಅಪ್ರೆಂಟಿಸ್ಶಿಪ್ಗಾಗಿ ಮೃಗಾಲಯಕ್ಕೆ ಸೇರಿದ್ದರು. ಕೇವಲ ಒಂದೂವರೆ ತಿಂಗಳ ಸೇವಾವಧಿಯಲ್ಲಿದ್ದ ತರಬೇತಿ ನಿರತ ವೈದ್ಯೆಯನ್ನು ಇಂತಹ ಅಪಾಯಕಾರಿ ಪ್ರಾಣಿಯ ಬಳಿ ಒಂಟಿಯಾಗಿ ಕಳುಹಿಸಿದ್ದು ಯಾಕೆ.ಅವಳು ತಂದೆ-ತಾಯಿಗೆ ಒಬ್ಬಳೇ ಮಗಳು. ಸಣ್ಣ ಪಕ್ಷಿಗಳಾಗಿದ್ದರೆ ಪರವಾಗಿಲ್ಲ, ನೀರಾನೆಯಂತಹ ದೈತ್ಯ ಪ್ರಾಣಿಯ ಬಳಿ ಒಬ್ಬ ತರಬೇತಿ ಪಡೆಯುತ್ತಿರುವ ವೈದ್ಯೆಯನ್ನು ಮಾರ್ಗದರ್ಶಕರಿಲ್ಲದೆ ಬಿಟ್ಟಿದ್ದು ಸರಿಯಲ್ಲ.
: ರಾಜಶೇಖರ್,
ಮೃತರ ಸೋದರ ಮಾವ.
