ಶಿವಮೊಗ್ಗ, : ನಗರದ ಪ್ರಸಿದ್ಧ ಶಿವಮೊಗ್ಗ ಮಾರಿಕಾಂಬಾ ಜಾತ್ರೆ ಪ್ರಯುಕ್ತ ಪ್ರತಿಷ್ಠಾಪಿಸಲಾಗಿದ್ದ ದೇವಿಯನ್ನು ಭಕ್ತಿಭಾವದಿಂದ ಹಾಗೂ ಅದ್ದೂರಿ ಮೆರವಣಿಗೆಯೊಂದಿಗೆ ಮಾರಿಕಾಂಬಾ ವನಕ್ಕೆ ಬಿಡಲಾಯಿತು.
ಜಾತ್ರೆಯ ಅಂಗವಾಗಿ ನಗರದಲ್ಲಿ ಭವ್ಯವಾಗಿ ಪ್ರತಿಷ್ಠಾಪಿಸಲಾಗಿದ್ದ ದೇವಿಯ ಮೂರ್ತಿಗೆ ಪೂಜೆ, ಅಲಂಕಾರ ಹಾಗೂ ವಿಶೇಷ ಧಾರ್ಮಿಕ ವಿಧಿವಿಧಾನಗಳು ನೆರವೇರಿಸಲಾಯಿತು. ನಂತರ ಸಾವಿರಾರು ಭಕ್ತರ ಜಯಘೋಷ, ಡೊಳ್ಳು-ತಾಳ, ನಾದಸ್ವರಗಳ ಮಧ್ಯೆ ಮೆರವಣಿಗೆ ಆರಂಭವಾಯಿತು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು, ಮಹಿಳಾ ಬಳಗಗಳು, ಯುವಕರ ತಂಡಗಳು ಭಾಗವಹಿಸಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿವೆ.
ನಗರದ ಪ್ರಮುಖ ಬೀದಿಗಳ ಮೂಲಕ ಸಾಗಿದ ಮೆರವಣಿಗೆಗೆ ಎಲ್ಲೆಡೆ ಭಕ್ತರು ಹೂವಿನ ಮಳೆ ಸುರಿಸಿ ಭಕ್ತಿಭಾವ ವ್ಯಕ್ತಪಡಿಸಿದರು. ಭದ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಹಾಗೂ ನಗರ ಪಾಲಿಕೆ ವತಿಯಿಂದ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಮಾರಿಕಾಂಬಾ ವನದಲ್ಲಿ ವಿಧಿವಿಧಾನಗಳೊಂದಿಗೆ ದೇವಿಯ ವಿಸರ್ಜನೆ ನೆರವೇರಿತು.

ಜಾತ್ರೆಯ ಯಶಸ್ವಿ ಆಯೋಜನೆಗೆ ದೇವಸ್ಥಾನ ಸಮಿತಿ, ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರ ಗಮನಾರ್ಹವಾಗಿದೆ. ಹಬ್ಬದ ಅಂಗವಾಗಿ ನಗರದಲ್ಲಿ ಭಕ್ತಿಪರ ವಾತಾವರಣ ನಿರ್ಮಾಣವಾಗಿತ್ತು.
