ಶಿವಮೊಗ್ಗ: ತಾಲೂಕಿನ ಸುತ್ತುಕೋಟೆ ಗ್ರಾಮದಲ್ಲಿ ಮನೆಯಲ್ಲೇ ಯುವಕನೊಬ್ಬನನ್ನು ಹತ್ಯೆಗೈದಿರುವ ಘಟನೆ ನಡೆದಿದೆ. ಮೃತನನ್ನು ಗ್ರಾಮದ ನಿವಾಸಿ ಪ್ರವೀಣ್ (26) ಎಂದು ಗುರುತಿಸಲಾಗಿದೆ.
ಪ್ರವೀಣ್ ಟ್ರಾಕ್ಟರ್ ಬಾಡಿಗೆ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದ ಎನ್ನಲಾಗಿದೆ. ನಿನ್ನೆ ರಾತ್ರಿ ಎಂದಿನಂತೆ ಊಟ ಮುಗಿಸಿ ಮನೆಯಲ್ಲಿ ಮಲಗಿದ್ದ ವೇಳೆ ದುಷ್ಕರ್ಮಿಗಳು ಮನೆಗೆ ನುಗ್ಗಿ ತಲೆ ಭಾಗಕ್ಕೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.
ಪ್ರವೀಣ್ ಕೆಲ ಯುವಕರಿಗೆ ಕೆಲಸದ ನಿಮಿತ್ತ ಬೆಳಗ್ಗೆ ಬರಲು ತಿಳಿಸಿದ್ದ ಎನ್ನಲಾಗಿದೆ. ಅದರಂತೆ ಇಂದು ಬೆಳಗ್ಗೆ ಅವರು ಕರೆ ಮಾಡಿದರೂ ಫೋನ್ ಸ್ವೀಕರಿಸದ ಹಿನ್ನೆಲೆಯಲ್ಲಿ ಮನೆಗೆ ತೆರಳಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಪ್ರಾಥಮಿಕ ಮಾಹಿತಿಯಂತೆ ವ್ಯವಹಾರಿಕ ವೈಷಮ್ಯವೇ ಕೊಲೆಗೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು, ಕುಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
