ಶಿವಮೊಗ್ಗ: ವಾಹನ ಸವಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ವಿಧಿಸಲಾದ ಇ-ಚಲನ್ ದಂಡದ ಮೊತ್ತದಲ್ಲಿ ಶೇ.50 ರಷ್ಟು ರಿಯಾಯಿತಿ ಘೋಷಣೆ ಮಾಡಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ಜಿ.ಎ. ತಿಳಿಸಿದರು.
ಗುರುವಾರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವಿ.ಸಿ. ಕೊಠಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಲೋಕ್ ಅದಾಲತ್, ಸಮಾಧಾನ್ ಸಮಾರೋಹ್ ವಿಶೇಷ ಲೋಕ್ ಅದಾಲತ್, ಎನ್‌ಐ ಕಾಯ್ದೆಯ ವಿಶೇಷ ಲೋಕ್ ಅದಾಲತ್, ಖಾಯಂ ಲೋಕ್ ಅದಾಲತ್, ಮಾದಕ ದ್ರವ್ಯ ವ್ಯಸನ ಮುಕ್ತಿ ಜಾಗೃತಿ ಹಾಗೂ ಹಸಿರು ಅಭಿಯಾನ ಕುರಿತಂತೆ ಮಾಹಿತಿ ನೀಡಿದರು.
ಮೇ 2026ರೊಳಗೆ ಸಂಚಾರ ನಿಯಮ ಉಲ್ಲಂಘನೆಗಾಗಿ ದಾಖಲಾಗಿರುವ ಇ-ಚಲನ್ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.೫೦ ವಿನಾಯಿತಿ ನೀಡಲಾಗಿದ್ದು, ಈ ವಿಶೇಷ ಅವಕಾಶ ಜೂ.21ರಿಂದ ಜು.10ರವರೆಗೆ ಒಟ್ಟು 20 ದಿನಗಳ ಕಾಲ ಮಾತ್ರ ಲಭ್ಯವಿರುತ್ತದೆ ಎಂದು ಹೇಳಿದರು.
ಶಿವಮೊಗ್ಗ ನಗರದಲ್ಲಿ ಆ.೨೮.೨೦೨೩ರಿಂದ ಏ.೩೦,೨೦೨೬ರವರೆಗೆ ಸ್ಮಾರ್ಟ್ ಸಿಟಿ ಪೊಲೀಸ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ನ ಐಟಿಎಂಎಸ್ ಮೂಲಕ ಒಟ್ಟು ೪,೩೮,೦೨೩ ಇ-ಚಲನ್ ಪ್ರಕರಣಗಳು ದಾಖಲಾಗಿದ್ದು, ಒಟ್ಟು ರೂ.೩೧.೮೦ ಕೋಟಿ ದಂಡ ವಿಧಿಸಲಾಗಿದೆ. ಇದರಲ್ಲಿ ೧,೩೮,೯೮೬ ಪ್ರಕರಣಗಳು ಇತ್ಯರ್ಥಗೊಂಡು ರೂ.೬.೦೯ ಕೋಟಿ ವಸೂಲಿಯಾಗಿದ್ದು, ಇನ್ನೂ ೨,೯೯,೦೩೭ ಪ್ರಕರಣಗಳಿಗೆ ಸಂಬಂಧಿಸಿದಂತೆ ರೂ.೨೩.೭೧ ಕೋಟಿ ದಂಡ ಬಾಕಿ ಉಳಿದಿದೆ ಎಂದು ವಿವರಿಸಿದರು.
ಸುಪ್ರೀಂ ಕೋರ್ಟ್ ಪ್ರಕರಣಗಳಿಗೆ ‘ಸಮಾಧಾನ್ ಸಮಾರೋಹ್ :
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಆ.೨೧, ೨೨ ಮತ್ತು ೨೩ರಂದು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳಿಗೆ ವಿಶೇಷ ಲೋಕ್ ಅದಾಲತ್ ಆಯೋಜಿಸಲಾಗಿದೆ. ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ ಗುರುತಿಸಲಾದ ೨೩ ಪ್ರಕರಣಗಳನ್ನು ಮಧ್ಯಸ್ಥಿಕೆಯ ಮೂಲಕ ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಚೆಕ್ ಅಮಾನ್ಯ ಪ್ರಕರಣಗಳಿಗೆ ವಿಶೇಷ ಲೋಕ್ ಅದಾಲತ್ :
ಚೆಕ್ ಅಮಾನ್ಯ ಪ್ರಕರಣಗಳ ತ್ವರಿತ ಇತ್ಯರ್ಥಕ್ಕಾಗಿ ಜು.೧೮ ಹಾಗೂ ನ.೨೧ರಂದು ವಿಶೇಷ ಲೋಕ್ ಅದಾಲತ್ ಆಯೋಜಿಸಲಾಗಿದ್ದು, ಜಿಲ್ಲೆಯಲ್ಲಿ ಮೇ ೩೧ರ ತನಕ ೭,೫೨೫ ಪ್ರಕರಣಗಳು ಬಾಕಿ ಇವೆ ಎಂದು ಹೇಳಿದರು.
ಜು. 11ರಂದು ರಾಷ್ಟ್ರೀಯ ಲೋಕ್ ಅದಾಲತ್ :
ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಜು. 11ರಂದು ವರ್ಷದ ಎರಡನೇ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದ್ದು, ವೈವಾಹಿಕ ವಿವಾದ, ಅಪಘಾತ ಪರಿಹಾರ, ಚೆಕ್ ಅಮಾನ್ಯ, ವಾಣಿಜ್ಯ ಹಾಗೂ ವಿವಿಧ ಸಿವಿಲ್ ಮತ್ತು ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು ಎಂದರು.
ಖಾಯಂ ಲೋಕ್ ಅದಾಲತ್ ಮತ್ತು ಜಾಗೃತಿ ಅಭಿಯಾನ :
ಸಾರಿಗೆ, ವಿದ್ಯುತ್, ನೀರು, ಬ್ಯಾಂಕಿಂಗ್, ವಿಮೆ, ಆಸ್ಪತ್ರೆ ಸೇರಿದಂತೆ ಸಾರ್ವಜನಿಕ ಸೇವೆಗಳಿಗೆ ಸಂಬಂಧಿಸಿದ ವಿವಾದಗಳ ಇತ್ಯರ್ಥಕ್ಕೆ ಖಾಯಂ ಲೋಕ್ ಅದಾಲತ್ ಉತ್ತಮ ವೇದಿಕೆಯಾಗಿದ್ದು, ಯಾವುದೇ ಕೋರ್ಟ್ ಶುಲ್ಕ ಅಥವಾ ಆದಾಯ ಮಿತಿ ಇರುವುದಿಲ್ಲ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ.ಎಸ್. ಹಾಗೂ ನಗರ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ದೇವರಾಜ್ ಉಪಸ್ಥಿತರಿದ್ದರು.
———————————————–
ಇ-ಚಲನ್ ದಂಡಕ್ಕೆ ಶೇ.೫೦ ರಿಯಾಯಿತಿ
ಸಂಚಾರಿ ನಿಯಮ ಉಲ್ಲಂಘನೆಗಾಗಿ ಮೇ-೨೦೨೬ರೊಳಗೆ ದಾಖಲಾಗಿರುವ ಇ-ಚಲನ್ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.೫೦ ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಜೂ.೨೧ರಿಂದ ಜು.೧೦ರವರೆಗೆ ಒಟ್ಟು ೨೦ ದಿನಗಳ ಕಾಲ ಈ ವಿಶೇಷ ಅವಕಾಶ ಲಭ್ಯವಿರಲಿದೆ. ಸಾರ್ವಜನಿಕರು ಆನ್‌ಲೈನ್ ಅಥವಾ ಸಂಚಾರ ಪೊಲೀಸ್ ಠಾಣೆಗಳಲ್ಲಿ ದಂಡ ಪಾವತಿಸಿ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು.ದಂಡ ಪಾವತಿಗೆ ಪೂರ್ವ ಮತ್ತು ಪಶ್ಚಿಮ ಸಂಚಾರ ಪೊಲೀಸ್ ಠಾಣೆಗಳು, ಭದ್ರಾವತಿ ಸಂಚಾರ ಠಾಣೆ, ಸಂಚಾರ ಸಿಬ್ಬಂದಿಯ ಪಿಡಿಎ ಯಂತ್ರಗಳು ಹಾಗೂ ನಗರದ ಪ್ರಮುಖ ವೃತ್ತಗಳಲ್ಲಿರುವ ಪೊಲೀಸ್ ಕಿಯೋಸ್ಕ್‌ಗಳಲ್ಲಿ ಬೆಳಗ್ಗೆ ೯ರಿಂದ ರಾತ್ರಿ ೯ರವರೆಗೆ ವಿಶೇಷ ಕೌಂಟರ್ ವ್ಯವಸ್ಥೆ ಮಾಡಲಾಗಿದೆ.
————————————————
ಜುಲೈ ೧೧ರಂದು ರಾಷ್ಟ್ರೀಯ ಲೋಕ್ ಅದಾಲತ್
ಬಾಕಿ ಇರುವ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಜುಲೈ ೧೧ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ. ವೈವಾಹಿಕ ವಿವಾದ, ಅಪಘಾತ ಪರಿಹಾರ, ಚೆಕ್ ಅಮಾನ್ಯ, ಸಾಲ, ವಾಣಿಜ್ಯ ಹಾಗೂ ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವ ಅವಕಾಶ ಸಾರ್ವಜನಿಕರಿಗೆ ಲಭ್ಯವಿದೆ. ಈ ಹಿಂದಿನ ಲೋಕ್ ಅದಾಲತ್‌ನಲ್ಲಿ ಸಾವಿರಾರು ಪ್ರಕರಣಗಳನ್ನು ಇತ್ಯರ್ಥಪಡಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ವಿವಾದಗಳಿಗೆ ಅಂತ್ಯ ಕಂಡುಬಂದಿತ್ತು.
—————————–
ಹಸಿರು ಅಭಿಯಾನಕ್ಕೆ ಚಾಲನೆ: ೫ ಕೋಟಿ ಸಸಿ ನೆಡುವ ಗುರಿ
ಶಿವಮೊಗ್ಗ ಜಿಲ್ಲೆಯ ಅರಣ್ಯೀಕರಣ ಹಾಗೂ ಕೆರೆಗಳ ಪುನಶ್ಚೇತನಕ್ಕಾಗಿ ಧರೆಷ್ ಫೌಂಡೇಶನ್ ಸಹಯೋಗದಲ್ಲಿ ಬೃಹತ್ ಹಸಿರು ಅಭಿಯಾನ ಕೈಗೊಳ್ಳಲಾಗಿದೆ. ಯೋಜನೆಯಡಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಟ್ಟು ೫ ಕೋಟಿ ಸಸಿಗಳನ್ನು ನೆಟ್ಟು, ಮುಂದಿನ ಐದು ವರ್ಷಗಳ ಕಾಲ ಅವುಗಳನ್ನು ಸಂರಕ್ಷಿಸಿ ಪೋಷಣೆ ಮಾಡುವ ಕಾರ್ಯ ಕೈಗೊಳ್ಳಲಾಗುತ್ತದೆ.
Subscribe to Updates
Get the latest creative news from FooBar about art, design and business.
ಇ-ಚಲನ್ ದಂಡಕ್ಕೆ ಶೇ.50 ರಿಯಾಯಿತಿ: ಜೂ.21ರಿಂದ ಜು.10ರವರೆಗೆ ಸುವರ್ಣಾವಕಾಶ
50% discount on e-challan fine: Golden opportunity from June 21 to July 10
