ಶಿವಮೊಗ್ಗ : ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೂರ್ಯ ಬಡಾವಣೆಯಲ್ಲಿ ವೃದ್ಧೆಯೊಬ್ಬರ ಮಾಂಗಲ್ಯ ಸರ ಕಳವು ಮಾಡಿದ ಪ್ರಕರಣವನ್ನು ವಿನೋಬನಗರ ಪೊಲೀಸರು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
73 ವರ್ಷದ ವೃದ್ಧೆಯೊಬ್ಬರು ಮೇ 13ರಂದು ಬೆಳಗಿನ ವಾಕಿಂಗ್ಗೆ ತೆರಳಿದ್ದ ವೇಳೆ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ಅವರ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 0093/2026ರಡಿ ಬಿ.ಎನ್.ಎಸ್ ಕಲಂ 309(4) ಅನ್ವಯ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ ಎ.ಜಿ ಹಾಗೂ ಡಿವೈಎಸ್ಪಿ ಸಂಜೀವ್ ಕುಮಾರ್ ಟಿ ಅವರ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಯಿತು. ವಿನೋಬನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಂತೋಷ ಕುಮಾರ್ ಡಿ.ಕೆ ನೇತೃತ್ವದಲ್ಲಿ ಪಿಎಸ್ಐ ತಿರುಮಲೇಶ್ ಜಿ ಹಾಗೂ ಸಿಬ್ಬಂದಿಗಳ ವಿಶೇಷ ತಂಡ ರಚಿಸಲಾಗಿತ್ತು.
ತನಿಖಾ ತಂಡವು ಪ್ರಕರಣದ ಆರೋಪಿಗಳಾದ ಚಾಲುಕ್ಯನಗರ ಗೋಪಾಳ ನಿವಾಸಿ ಭರತ್ (21) ಹಾಗೂ ಮೇಲಿನ ತುಂಗಾನಗರ ಗೋಪಾಳ ನಿವಾಸಿ ಮೊಹ್ಮದ್ ಆಬೀದ್ (19) ಅವರನ್ನು ಬಂಧಿಸಿದೆ. ಆರೋಪಿಗಳಿಂದ ಸುಮಾರು 7 ಗ್ರಾಂ ತೂಕದ ₹1 ಲಕ್ಷ ಮೌಲ್ಯದ ಬಂಗಾರದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ₹40 ಸಾವಿರ ಮೌಲ್ಯದ ಬೈಕ್ ಸೇರಿದಂತೆ ಒಟ್ಟು ₹1.40 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣವನ್ನು ಶೀಘ್ರ ಪತ್ತೆ ಹಚ್ಚಿದ ತನಿಖಾ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ ಶ್ಲಾಘಿಸಿದ್ದಾರೆ.
Subscribe to Updates
Get the latest creative news from FooBar about art, design and business.
ವೃದ್ಧೆಯ ಮಾಂಗಲ್ಯ ಸರ ಕಳವು ಪ್ರಕರಣ ಭೇದಿಸಿದ ವಿನೋಬನಗರ ಪೊಲೀಸರು : ಇಬ್ಬರು ಆರೋಪಿಗಳ ಬಂಧನ ; ₹1.40 ಲಕ್ಷ ಮೌಲ್ಯದ ಚಿನ್ನ ಹಾಗೂ ಬೈಕ್ ವಶ
Two accused arrested; gold and bike worth ₹1.40 lakh seized
