ಹೊಸನಗರ ಪೊಲೀಸರ ಕಾರ್ಯಾಚರಣೆ: ಬೈಕ್ ಹಾಗೂ ದೇವಸ್ಥಾನ ಹುಂಡಿ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು
ಭದ್ರಾವತಿಯ ಆರೋಪಿ ಬಂಧನ; 60 ಸಾವಿರ ಮೌಲ್ಯದ ಬೈಕ್ ಮತ್ತು ನಗದು ವಶ
ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಬೈಕ್ ಕಳ್ಳತನ ಹಾಗೂ ದೇವಸ್ಥಾನದ ಹುಂಡಿ ಹಣ ಕಳವು ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ನಗರ ರಸ್ತೆಯ ಗುರುಶಕ್ತಿ ಪೆಟ್ರೋಲ್ ಬಂಕ್ ಸಮೀಪ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿರುವ ಬಗ್ಗೆ ದ್ಯಾವರ್ಸ ಗ್ರಾಮದ ಪ್ರಕಾಶ್ ಬಸವಪೂಜಾರಿ ನೀಡಿದ ದೂರಿನ ಮೇರೆಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ವೇಳೆ ನಗರ ರಸ್ತೆಯ ಪಕ್ಕದಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಬಾಗಿಲಿನ ಬೀಗ ಒಡೆದು ಹುಂಡಿಯಲ್ಲಿದ್ದ ಹಣ ಕಳ್ಳತನ ಮಾಡಿರುವ ಬಗ್ಗೆ ಮಹೇಶ್ ಅವರು ನೀಡಿದ ದೂರಿನ ಮೇರೆಗೆ ಮತ್ತೊಂದು ಪ್ರಕರಣ ದಾಖಲಾಗಿತ್ತು.
ಈ ಎರಡೂ ಪ್ರಕರಣಗಳ ತನಿಖೆಯನ್ನು ಕೈಗೊಂಡ ಹೊಸನಗರ ಪೊಲೀಸರು, ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ತೀರ್ಥಹಳ್ಳಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ಹಾಗೂ ಹೊಸನಗರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದರು.
ಪಿಎಸ್‌ಐ ಶಂಕರಗೌಡ ಪಾಟೀಲ್ ನೇತೃತ್ವದ ತಂಡವು ಆರೋಪಿಯಾದ ಮೂರ್ತಿ.ವಿ ಅಲಿಯಾಸ್ ಕತ್ತೆಮೂರ್ತಿ (28), ಬೋವಿ ಕಾಲೋನಿ, ಭದ್ರಾವತಿ ನಿವಾಸಿಯನ್ನು ಪತ್ತೆಹಚ್ಚಿ ಬಂಧಿಸಿದೆ. ಆರೋಪಿಯಿಂದ ಕಳ್ಳತನವಾಗಿದ್ದ ಸುಮಾರು 60000ಮೌಲ್ಯದ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಹಾಗೂ ದೇವಸ್ಥಾನದ ಹುಂಡಿಯಿಂದ ಕಳುವಾಗಿದ್ದ 1100 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
