ಶಿವಮೊಗ್ಗ : ಅಧ್ಯಯನವಿಲ್ಲದ ಅಧ್ಯಾಪನ ಅರ್ಥಹೀನವಾಗಿದ್ದು, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಶಿಕ್ಷಕರು ನಿರಂತರ ಕಲಿಕೆ ಮತ್ತು ಕ್ರೀಯಾಶೀಲ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಮಕ್ಕಳಿಗೆ ಪರಿಣಾಮಕಾರಿ ಶಿಕ್ಷಣ ನೀಡಲು ಸಾಧ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಹೇಳಿದರು.
ನಗರದ ಕಸ್ತೂರಬಾ ಬಾಲಿಕಾ ಪ್ರೌಢಶಾಲೆ ವತಿಯಿಂದ ಮಂಗಳವಾರ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ೨೦೨೬-೨೭ನೇ ಸಾಲಿನ ವಿದ್ಯಾರ್ಥಿನಿ ಸಂಘದ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶ ಸಾಧಿಸಿದ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪುಸ್ತಕಾಧಾರಿತ ಶಿಕ್ಷಣದ ಜೊತೆಗೆ ಮಕ್ಕಳಲ್ಲಿರುವ ಅಂತಃಶಕ್ತಿಯನ್ನು ಗುರುತಿಸಿ, ಅವರನ್ನು ಸಾಧಕರಾಗಿ ರೂಪಿಸುವತ್ತ ಶಿಕ್ಷಕರು ಹೆಚ್ಚಿನ ಗಮನ ಹರಿಸಬೇಕು ಎಂದರು. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಎನ್‌ಇಎಸ್ ವಿದ್ಯಾರ್ಥಿಗಳು ಸಾಧನೆ ಮೂಲಕ ತಮ್ಮದೇ ಆದ ಗುರುತನ್ನು ನಿರ್ಮಿಸುತ್ತಿದ್ದಾರೆ ಎಂದು ಹೇಳಿದರು.
72 ವರ್ಷಗಳ ಶೈಕ್ಷಣಿಕ ಪರಂಪರೆ ಹೊಂದಿರುವ ಕಸ್ತೂರಬಾ ಶಾಲೆಯು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶ ದಾಖಲಿಸಿದೆ. ಈ ಸಾಧನೆ ಹಿಂದೆ ಶಿಕ್ಷಕರ ಪರಿಶ್ರಮ ಮಹತ್ವದ್ದಾಗಿದೆ.
: ಡಾ.ಪಿ.ನಾರಾಯಣ್,
ಸಹ ಕಾರ್ಯದರ್ಶಿ, ಎನ್ಇಎಸ್ಶೇ.100 ಫಲಿತಾಂಶಕ್ಕೆ ಶಿಕ್ಷಕರಿಗೆ ಸನ್ಮಾನ
ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ ಕಸ್ತೂರಬಾ ಬಾಲಿಕಾ ಪ್ರೌಢಶಾಲೆಯ ಶಿಕ್ಷಕರ ತಂಡವನ್ನು ಕಾರ್ಯಕ್ರಮದಲ್ಲಿ ವಿಶೇಷವಾಗಿ ಅಭಿನಂದಿಸಲಾಯಿತು.
ಶಿಕ್ಷಣ ಎಂದರೆ ಕೇವಲ ಪಾಠಪುಸ್ತಕಗಳಿಗೆ ಸೀಮಿತವಲ್ಲ. ಮಕ್ಕಳಲ್ಲಿ ಪ್ರಜಾತಂತ್ರದ ಅರಿವು, ಸಾಮಾಜಿಕ ಜವಾಬ್ದಾರಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಪ್ರಕ್ರಿಯೆಯೂ ಶಿಕ್ಷಣದ ಭಾಗವಾಗಿದೆ. ಹೃದಯಕ್ಕೆ ನೀಡುವ ಶಿಕ್ಷಣವೇ ನೈಜ ಶಿಕ್ಷಣವಾಗಿದ್ದು, ನೈತಿಕತೆ ಮತ್ತು ಮೌಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಜೀವನದಲ್ಲಿ ಎತ್ತರಕ್ಕೇರುವುದು ಮುಖ್ಯವಾದರೂ, ತಲುಪಿದ ಎತ್ತರವನ್ನು ಉಳಿಸಿಕೊಳ್ಳುವುದು ಇನ್ನಷ್ಟು ಮುಖ್ಯ. ಮಕ್ಕಳು ಕುಟುಂಬ ವ್ಯವಸ್ಥೆಗೆ ಗೌರವ ನೀಡಿ, ಪೋಷಕರ ಆಶಯಗಳಿಗೆ ಸ್ಪಂದಿಸಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇತರರ ಟೀಕೆಗಳಿಗೆ ಪ್ರತಿಕ್ರಿಯೆ ನೀಡುವುದಕ್ಕಿಂತ ಸಾಧನೆಯ ಮೂಲಕ ಉತ್ತರಿಸಬೇಕು. ಕತ್ತಲು ಮತ್ತು ಅಹಂಕಾರ ಒಂದೇ ಸ್ವರೂಪದವು; ಕತ್ತಲಲ್ಲಿ ಬೆಳಕು ಇಲ್ಲದಂತೆ ಅಹಂಕಾರದಲ್ಲಿ ಪ್ರಜ್ಞೆಗೆ ಸ್ಥಾನವಿರುವುದಿಲ್ಲ ಎಂದು ಹೇಳಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಾಗೂ ವಿಷಯವಾರು ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ನೆನಪಿನ ಕಾಣಿಕೆ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್. ನಾಗರಾಜ, ನಿರ್ದೇಶಕ ಎಚ್.ಸಿ. ಶಿವಕುಮಾರ್, ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರವಿಕುಮಾರ್, ವಿದ್ಯಾರ್ಥಿನಿ ಸಂಘದ ಪ್ರಧಾನಿ ಗಾನವಿ ಹಾಗೂ ವಿರೋಧ ಪಕ್ಷದ ನಾಯಕಿ ಕೃತಿಕ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲ ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.