ಶಿವಮೊಗ್ಗ : ಜಿಲ್ಲೆಯಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಸಾಗಾಟ, ಮಾರಾಟ ಮತ್ತು ಬಳಕೆ ತಡೆಯಲು ಜಿಲ್ಲಾ ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ತಿಳಿಸಿದರು.
ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಡಿ.ಎ.ಆರ್ ಸಭಾಂಗಣದಲ್ಲಿ ಕಳೆದ ಆರು ತಿಂಗಳಲ್ಲಿ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡ ಸುಮಾರು 25 ಲಕ್ಷ ರೂ. ಮೌಲ್ಯದ 59 ಕೆ.ಜಿ. ಗಾಂಜಾವನ್ನು ಸಾರ್ವಜನಿಕ ವೀಕ್ಷಣೆಗೆ ಇಟ್ಟು ಬಳಿಕ ಕಾನೂನುಬದ್ಧವಾಗಿ ನಾಶಪಡಿಸಲಾಯಿತು.
ಮಾತನಾಡಿದ ಅವರು, ಜಿಲ್ಲೆಗೆ ಹೊರ ರಾಜ್ಯಗಳಿಂದ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಎಂಟು ಮಂದಿಯನ್ನು ಪತ್ತೆಹಚ್ಚಿ ಜೈಲಿಗೆ ಕಳುಹಿಸಲಾಗಿದ್ದು, ಇನ್ನಷ್ಟು ಆರೋಪಿಗಳ ವಿರುದ್ಧ ತನಿಖೆ ಮುಂದುವರಿದಿದೆ ಎಂದರು.
ಜಿಲ್ಲೆಯಲ್ಲಿ 18ರಿಂದ 30 ವರ್ಷದ ಯುವಕರಲ್ಲಿ ಮಾದಕ ವ್ಯಸನ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ತಿಳಿಸಿದ ಅವರು, ಶಾಲಾ-ಕಾಲೇಜುಗಳಲ್ಲಿ ತಪಾಸಣೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು. 484 ವಿದ್ಯಾರ್ಥಿಗಳ ತಪಾಸಣೆಯಲ್ಲಿ ಮೂವರು ಗಾಂಜಾ ಸೇವಿಸಿರುವುದು ಪತ್ತೆಯಾಗಿದ್ದು, ಅವರಿಗೆ ಆಪ್ತ ಸಮಾಲೋಚನೆ ನಡೆಸಲಾಗಿದೆ ಎಂದು ಹೇಳಿದರು.
ಕಳೆದ ಆರು ತಿಂಗಳಲ್ಲಿ 31 ಪ್ರಕರಣಗಳನ್ನು ದಾಖಲಿಸಿ, ೬೪ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ೧೪೨೬ ಮಂದಿಗೆ ತಪಾಸಣೆ ನಡೆಸಿ ೩೮೫ ಮಂದಿ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ೫೪ ಮಂದಿ ವ್ಯಸನಮುಕ್ತರಾಗಿ ಮುಖ್ಯವಾಹಿನಿಗೆ ಮರಳಿರುವುದು ವಿಶೇಷ ಎಂದರು. ಮಾದಕ ಜಾಲ ಪತ್ತೆಗೆ ಸೈಬರ್ ತನಿಖೆ, ಡ್ರೋಣ್ ಕಣ್ಗಾವಲು ಹಾಗೂ ‘ಪಬ್ಲಿಕ್ ಐ’ ವಾಟ್ಸಾಪ್ ಸೇವೆ ಜಾರಿಗೊಳಿಸಲಾಗಿದ್ದು, ಸಾರ್ವಜನಿಕರು 8277982900 ಸಂಖ್ಯೆಗೆ ಮಾಹಿತಿ ನೀಡಬಹುದು. ಮಾಹಿತಿದಾರರ ಗೌಪ್ಯತೆ ಕಾಪಾಡಲಾಗುವುದು ಎಂದು ಭರವಸೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧಿಕಾರಿ ಕಾರಿಯಪ್ಪ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ನಶೆಮುಕ್ತ ಶಿವಮೊಗ್ಗಕ್ಕೆ ಪೊಲೀಸ್ ವಿಶೇಷ ಕಾರ್ಯಾಚರಣೆ : 59 ಕೆ.ಜಿ. ಗಾಂಜಾ ನಾಶ
Police special operation to make Shivamogga drug-free
