ಶಿವಮೊಗ್ಗ : ಸಾಗರ ಪಟ್ಟಣದ ಜೆಪಿ ನಗರದಲ್ಲಿ ಕೌಟುಂಬಿಕ ಕಲಹ ಹಾಗೂ ಅಕ್ರಮ ಸಂಬಂಧದ ಹಿನ್ನೆಲೆ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೃತನ ಪತ್ನಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

ಪರಶುರಾಮ್ (40) ಕೊಲೆಯಾದ ವ್ಯಕ್ತಿ. ಇವರ ಪತ್ನಿ ಚೈತ್ರಾ ಹಾಗೂ ಮಂಜು @ ಟೀ ಪುಡಿ ಮಂಜು ನಡುವೆ ಈ ಹಿಂದಿನಿಂದಲೂ ಸಂಬಂಧವಿದ್ದು, ಈ ವಿಚಾರವಾಗಿ ಮನೆಯಲ್ಲಿ ಆಗಾಗ್ಗೆ ಗಲಾಟೆಗಳು ನಡೆಯುತ್ತಿತ್ತೆಂದು ತಿಳಿದುಬಂದಿದೆ.
ದಿನಾಂಕ 15-05-2026ರಂದು ರಾತ್ರಿ ಪರಶುರಾಮ್ ಮತ್ತು ಚೈತ್ರಾ ನಡುವೆ ಕೌಟುಂಬಿಕ ವಿಚಾರವಾಗಿ ಜಗಳ ನಡೆಯುತ್ತಿದ್ದ ವೇಳೆ ಮಂಜು ಮನೆಯೊಳಗೆ ಬಂದಿದ್ದಾನೆ. ಈ ವೇಳೆ ಮಂಜು ಹಾಗೂ ಪರಶುರಾಮ್ ನಡುವೆ ತೀವ್ರ ವಾಗ್ವಾದ ಮತ್ತು ಗಲಾಟೆ ನಡೆದಿದ್ದು, ಪರಶುರಾಮ್ ಮನೆಯಲ್ಲಿದ್ದ ಕುಡುಗೋಲು ಹಿಡಿದಿದ್ದರೆ, ಮಂಜು ಚಾಕು ಹಿಡಿದು ಜಗಳವಾಡಿದ್ದಾನೆ ಎನ್ನಲಾಗಿದೆ.
ಗಲಾಟೆಯ ಸಂದರ್ಭ ಪರಶುರಾಮ್ ಹೊಟ್ಟೆ ಹಿಡಿದು “ಮಂಜು ಚುಚ್ಚಿದ್ದಾನೆ” ಎಂದು ಕೂಗಿಕೊಂಡಿದ್ದು, ಬಳಿಕ ಗಾಯಾಳುವನ್ನು ಆಟೋ ಮೂಲಕ ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ ಮೃತಪಟ್ಟಿದ್ದಾರೆ.
ಈ ಕುರಿತು ಮೃತನ ಪತ್ನಿ ಚೈತ್ರಾ ಘಟನೆ ಬಗ್ಗೆ ಮಾಹಿತಿ ತಿಳಿದಿದ್ದರೂ ವಿಷಯವನ್ನು ಮುಚ್ಚಿಟ್ಟಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದೂರಿನ ಆಧಾರದಲ್ಲಿ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 107/2026ರಡಿ ಬಿಎನ್‌ಎಸ್ ಕಾಯ್ದೆಯ ಕಲಂ 103, 238, 332, 333 ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಪ್ರಕರಣದ ತನಿಖಾಧಿಕಾರಿಗಳಾದ ಸಾಗರ ಟೌನ್ ಪೊಲೀಸ್ ಠಾಣೆಯ ಪಿಐ ಅವರು ಆರೋಪಿತರಾದ ಚೈತ್ರಾ ಹಾಗೂ ಮಂಜು @ ಟೀ ಪುಡಿ ಮಂಜು ಅವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
