ಶಿವಮೊಗ್ಗ, : ನಗರದ ಟಿಪ್ಪುನಗರದಲ್ಲಿ ಯುವಕರ ಗುಂಪೊಂದು ಮಾರಕಾಸ್ತ್ರಗಳಿಂದ ಇಬ್ಬರು ಸಹೋದರರ ಮೇಲೆ ಹಲ್ಲೆ ನಡೆಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ. ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಟಿಪ್ಪುನಗರ 5ನೇ ತಿರುವಿನಲ್ಲಿ ನಡೆದ ಘಟನೆಯಲ್ಲಿ ಕಾರ್ ಡೀಲರ್ ರಹಮತ್ ಉಲ್ಲಾ ಹಾಗೂ ಅವರ ಸಹೋದರ ನ್ಯಾಮತ್ ಉಲ್ಲಾ ಗಾಯಗೊಂಡಿದ್ದಾರೆ. ದಾಳಿಯ ವೇಳೆ ರಹಮತ್ ಉಲ್ಲಾ ಅವರ ಬಲ ಭುಜದ ಭಾಗಕ್ಕೆ ಭರ್ಚಿಯಿಂದ ಇರಿಯಲಾಗಿದ್ದು, ನ್ಯಾಮತ್ ಉಲ್ಲಾ ಅವರ ಎಡಗೈಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ರಹಮತ್ ಉಲ್ಲಾ, “ಮನೆ ಬಳಿ ಕೆಲವರು ಗಲಾಟೆ ಮಾಡುತ್ತಿರುವುದಾಗಿ ನನ್ನ ಮಗಳು ಫೋನ್ ಮೂಲಕ ತಿಳಿಸಿದ್ದಳು. ತಕ್ಷಣ ನಾನು ಮತ್ತು ನನ್ನ ಸಹೋದರ ಅಲ್ಲಿಗೆ ತೆರಳಿದ್ದೆವು. ಮನೆ ಮುಂದೆ ಯಾಕೆ ಗಲಾಟೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದಾಗ ಸುಮಾರು 8 ರಿಂದ 9 ಯುವಕರ ಗುಂಪು ಏಕಾಏಕಿ ಹಲ್ಲೆ ನಡೆಸಿತು. ದಾಳಿ ನಡೆಸಿದವರು ಟಿಪ್ಪುನಗರದ ನಿವಾಸಿಗಳೇ” ಎಂದು ಆರೋಪಿಸಿದರು.
ಘಟನೆ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದಾಳಿಯ ಹಿನ್ನೆಲೆ ಮತ್ತು ಆರೋಪಿಗಳ ಕುರಿತು ತನಿಖೆ ಕೈಗೊಂಡಿದ್ದಾರೆ. ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.
