ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದಲ್ಲಿ ಕಾಲಿನ ಮೂಳೆ ಮುರಿತಕ್ಕೆ ಒಳಗಾಗಿದ್ದ ‘ದ್ರೋಣ’ ಆನೆಗೆ ಅತ್ಯಾಧುನಿಕ ಫೈಬರ್ ಗ್ಲಾಸ್ ಕ್ಯಾಸ್ಟಿಂಗ್ ಚಿಕಿತ್ಸೆ ನೀಡುವ ಮೂಲಕ ಯಶಸ್ವಿಯಾಗಿ ಗುಣಪಡಿಸಲಾಗಿದೆ. ಇಷ್ಟು ಬೃಹತ್ ಗಾತ್ರದ ಆನೆಗೆ ಭಾರತದಲ್ಲಿ ಈ ರೀತಿಯ ಚಿಕಿತ್ಸೆ ನೀಡಿರುವುದು ಇದೇ ಮೊದಲ ಪ್ರಯೋಗ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಹಾಸನ ಜಿಲ್ಲೆಯಲ್ಲಿ ನಿರಂತರವಾಗಿ ಹಾವಳಿ ನಡೆಸುತ್ತಿದ್ದ ಹಾಗೂ ಮಾನವ ಜೀವಕ್ಕೆ ಅಪಾಯ ಉಂಟುಮಾಡುತ್ತಿದ್ದ ಕಾಡಾನೆಯನ್ನು ಕಳೆದ ವರ್ಷ ಅರಣ್ಯ ಇಲಾಖೆ ಕುಂದಾಪುರ ತಾಲ್ಲೂಕಿನ ಸಿದ್ಧಾಪುರ ಸಮೀಪ ಸೆರೆಹಿಡಿದಿತ್ತು. ಸ್ಥಳೀಯವಾಗಿ ‘ಅಡ್ಕಬಡ್ಕ’ ಎಂದು ಕರೆಯಲಾಗುತ್ತಿದ್ದ ಆನೆಯನ್ನು ಬಳಿಕ ಸಕ್ರೆಬೈಲು ಆನೆ ಬಿಡಾರಕ್ಕೆ ಸ್ಥಳಾಂತರಿಸಿ ‘ದ್ರೋಣ’ ಎಂದು ಹೆಸರಿಡಲಾಗಿತ್ತು.

ಬಿಡಾರದ ಕ್ರಾಲ್ನಲ್ಲಿ (ಮರದ ಪಂಜರ) ಇದ್ದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದ ಪರಿಣಾಮ ದ್ರೋಣನ ಎಡ ಮುಂಗಾಲಿನ ಮೂಳೆ ಮುರಿದಿತ್ತು. ಆನೆಯ ದೇಹದ ಭಾರಿ ತೂಕದಿಂದಾಗಿ ಸಾಮಾನ್ಯವಾಗಿ ಬಳಸುವ ಪಿಒಪಿ ಕ್ಯಾಸ್ಟ್ ಹಾಕುವುದು ಕಷ್ಟವಾಗಿತ್ತು. ಪಿಒಪಿ ಕ್ಯಾಸ್ಟ್ ತೂಕ ತಡೆಯದೆ ಪುಡಿಯಾಗುವ ಹಾಗೂ ನೀರು ತಗುಲಿದರೆ ಹಾಳಾಗುವ ಸಾಧ್ಯತೆ ಇತ್ತು.
ಈ ಹಿನ್ನೆಲೆಯಲ್ಲಿ ಸಕ್ರೆಬೈಲು ಆನೆ ಬಿಡಾರದ ವೈದ್ಯ ಡಾ. ಮುರಳಿ ಮನೋಹರ್ ಹಾಗೂ ತುಮಕೂರಿನ ಪಶು ಶಸ್ತ್ರಚಿಕಿತ್ಸಕ ಡಾ. ಮಹೇಶ್ ಅವರ ತಂಡ ಫೈಬರ್ ಗ್ಲಾಸ್ ಕ್ಯಾಸ್ಟಿಂಗ್ ವಿಧಾನವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿತು. ಹಗುರವಾಗಿರುವುದರ ಜತೆಗೆ ಹೆಚ್ಚಿನ ಬಲ ಹೊಂದಿರುವ ಫೈಬರ್ ಗ್ಲಾಸ್ ನೀರು ತಗುಲಿದರೂ ಹಾಳಾಗುವುದಿಲ್ಲ ಎಂಬ ಕಾರಣಕ್ಕೆ ಈ ವಿಧಾನವನ್ನು ಆಯ್ಕೆ ಮಾಡಲಾಗಿತ್ತು.
ಸುಮಾರು ಎರಡು ಗಂಟೆಗಳ ಕಾಲ ಶ್ರಮಿಸಿ, ಅಗತ್ಯ ಚುಚ್ಚುಮದ್ದು ನೀಡಿ ದ್ರೋಣನ ಕಾಲಿಗೆ ಫೈಬರ್ ಗ್ಲಾಸ್ ಕ್ಯಾಸ್ಟ್ ಅಳವಡಿಸಲಾಯಿತು. ಸುಮಾರು 30 ದಿನಗಳ ಕಾಲ ಕ್ಯಾಸ್ಟ್ನ್ನು ಇರಿಸಲಾಗಿತ್ತು. ಮೂಳೆ ಶೀಘ್ರವಾಗಿ ಕೂಡಿಕೊಳ್ಳಲು ಹೈಡ್ರೋಥೆರಪಿ ಕೂಡ ನೀಡಲಾಯಿತು. ನೀರಿನಲ್ಲಿ ಆನೆಯ ದೇಹದ ಭಾರ ಕಡಿಮೆಯಾಗುವುದರಿಂದ ಕಾಲಿನ ಚಲನೆ ಸುಲಭವಾಗುತ್ತದೆ. ಇದರಿಂದ ಚಿಕಿತ್ಸೆಗೆ ನೆರವಾಯಿತು.
ಕ್ಯಾಸ್ಟಿಂಗ್ ತೆರವುಗೊಳಿಸಿದ ಬಳಿಕವೂ ದ್ರೋಣನನ್ನು ಸುಮಾರು ನಾಲ್ಕು ತಿಂಗಳ ಕಾಲ ಕ್ರಾಲ್ನಲ್ಲಿಯೇ ಇರಿಸಿ ವಿಶೇಷ ಆರೈಕೆ ಮಾಡಲಾಯಿತು. ಬಳಿಕ ನಡೆಸಿದ ಎಕ್ಸ್ರೇ ಪರೀಕ್ಷೆಯಲ್ಲಿ ಮುರಿದ ಮೂಳೆ ಸಂಪೂರ್ಣವಾಗಿ ಕೂಡಿಕೊಂಡಿರುವುದು ದೃಢಪಟ್ಟಿದೆ.
ಡಿಎಫ್ಒ ಪ್ರಸನ್ನ ಪಟಗಾರ್ ಅವರ ಆರ್ಥಿಕ ಸಹಕಾರ ಹಾಗೂ ಮಾವುತರು ಮತ್ತು ಕಾವಾಡಿಗಳ ನಿರಂತರ ಆರೈಕೆಯಿಂದ ಸುಮಾರು ₹80 ಸಾವಿರ ವೆಚ್ಚದಲ್ಲಿ ಚಿಕಿತ್ಸೆ ಯಶಸ್ವಿಯಾಗಿದೆ.
ಶ್ರೀಲಂಕಾದಲ್ಲಿ ಈ ಹಿಂದೆ ಆನೆ ಮರಿಯೊಂದಕ್ಕೆ ಫೈಬರ್ ಗ್ಲಾಸ್ ಕ್ಯಾಸ್ಟಿಂಗ್ ರೀತಿಯ ಚಿಕಿತ್ಸೆ ನೀಡಲಾಗಿತ್ತು. ಆದರೆ, ಭಾರತದಲ್ಲಿ ಇಷ್ಟು ದೊಡ್ಡ ಗಾತ್ರದ ಕಾಡಾನೆಗೆ ಈ ವಿಧಾನವನ್ನು ಬಳಸಿರುವುದು ಇದೇ ಮೊದಲ ಬಾರಿಗೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಸದ್ಯ ದ್ರೋಣ ಸಂಪೂರ್ಣ ಚೇತರಿಸಿಕೊಂಡಿದ್ದು, ಸಕ್ರೆಬೈಲು ಬಿಡಾರದ ಇತರ ಆನೆಗಳೊಂದಿಗೆ ನಿತ್ಯ ಕಾಡಿಗೆ ತೆರಳಿ ಸಹಜವಾಗಿ ಓಡಾಡುತ್ತಿದೆ.
