ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕಿನ ಯಡೆಹಳ್ಳಿ ಸೊಸೈಟಿ ಹಾಗೂ ಜೂನಿಯರ್ ಕಾಲೇಜು ರಸ್ತೆಯಲ್ಲಿರುವ ಸೊಸೈಟಿಗಳಲ್ಲಿ ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುತ್ತಿರುವ ಅಕ್ಕಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ಹುಳು ಹಿಡಿದ ಅಕ್ಕಿಯನ್ನು ವಿತರಿಸಲಾಗುತ್ತಿದೆ ಎಂದು ಪಡಿತರದಾರರು ಆರೋಪಿಸಿದ್ದಾರೆ.
ಅಕ್ಕಿಯ ಸ್ಥಿತಿಯನ್ನು ಕಂಡ ಫಲಾನುಭವಿಗಳು ಸೊಸೈಟಿ ಸಿಬ್ಬಂದಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. ಈ ಕುರಿತು ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ಕಳೆದ ತಿಂಗಳ ದಾಸ್ತಾನು ಇದಾಗಿದ್ದು, ಮುಖ್ಯ ಗೋದಾಮಿನಿಂದಲೇ ಕಳಪೆ ಗುಣಮಟ್ಟದ ಅಕ್ಕಿ ಪೂರೈಕೆಯಾಗಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ತೀರ್ಥಹಳ್ಳಿಯಲ್ಲಿ ಇತ್ತೀಚೆಗೆ ಪಡಿತರ ಅಕ್ಕಿ ಅಕ್ರಮ ಸಾಗಾಟದ ಆರೋಪಗಳು ಕೇಳಿಬಂದಿರುವ ಬೆನ್ನಲ್ಲೇ ಕಳಪೆ ಗುಣಮಟ್ಟದ ಅಕ್ಕಿ ವಿತರಣೆ ಕುರಿತು ದೂರುಗಳು ಕೇಳಿಬಂದಿರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಪಡಿತರದಾರರಿಗೆ ಗುಣಮಟ್ಟದ ಅಕ್ಕಿ ವಿತರಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಸ್ಥಳೀಯ ಗೋದಾಮಿನಲ್ಲಿರುವ ಅಕ್ಕಿಯ ಗುಣಮಟ್ಟವನ್ನು ಪರಿಶೀಲಿಸಿ, ಕಳಪೆ ದಾಸ್ತಾನು ಪೂರೈಕೆಯಾಗಿರುವ ಕುರಿತು ಆಹಾರ ಇಲಾಖೆ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
