ಶಿವಮೊಗ್ಗ: ಶಿಕ್ಷಣವು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿದಾಗ ಮಾತ್ರ ಅದು ಸಾರ್ಥಕವಾಗುತ್ತದೆ ಎಂದು ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ಕರ್ನಾಟಕದ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ತಿಳಿಸಿದರು.

ಕುವೆಂಪು ವಿಶ್ವವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಲಾಗಿದ್ದ 35 ನೇ ವಾರ್ಷಿಕ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೋಲುಗಳು ಜೀವನದ ಅವಿಭಾಜ್ಯ ಅಂಗವಾಗಿದ್ದು, ಅವುಗಳಿಂದ ಪಾಠ ಕಲಿದು ಮುಂದಕ್ಕೆ ಸಾಗುವುದು ಯಶಸ್ಸಿನ ಮೂಲವೆಂದು ತಿಳಿಸಿದರು. ಪದವಿ ಕೇವಲ ಜ್ಞಾನದ ಸಂಕೇತವಲ್ಲದೆ, ಸಮಾಜಕ್ಕೆ ಉತ್ತಮ ದಿಕ್ಕು ನೀಡಬಲ್ಲ ನಿಮ್ಮ ಸಾಮರ್ಥ್ಯದ ಪ್ರತೀಕವಾಗಿದೆ ಎಂದು ಹೇಳಿದರು. ಈ ಸಾಧನೆಯಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಮಹತ್ತರವಾಗಿದ್ದು, ಅವರ ಮಾರ್ಗದರ್ಶನವಿಲ್ಲದೆ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ ಎಂದು ಅಭಿನಂದಿಸಿದರು.
ಇಂದಿನ ಜಗತ್ತು ವಿಜ್ಞಾನ, ತಂತ್ರಜ್ಞಾನ ಮತ್ತು ನವೀನತೆಯ ವೇಗದ ಬದಲಾವಣೆಯನ್ನು ಅನುಭವಿಸುತ್ತಿದೆ. ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್ ಮತ್ತು ಡಿಜಿಟಲ್ ಕ್ರಾಂತಿ ಹೊಸ ಅವಕಾಶಗಳ ಜೊತೆಗೆ ಸವಾಲುಗಳನ್ನೂ ತಂದಿವೆ. ವಿದ್ಯಾರ್ಥಿಗಳು ನಿರಂತರವಾಗಿ ಕಲಿಯುವ ಮನೋಭಾವ ಬೆಳೆಸಿ ತಮ್ಮ ಕೌಶಲ್ಯಗಳನ್ನು ಕಾಲಕ್ಕೆ ತಕ್ಕಂತೆ ನವೀಕರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮೋದಿಯವರ ‘ವಿಕಸಿತ ಭಾರತ ೨೦೪೭’ ಕನಸನ್ನು ನನಸಾಗಿಸಲು ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಕನ್ನಡದ ಮಹಾನ್ ಕವಿ ಕುವೆಂಪು ಅವರ “ವಿಶ್ವಮಾನವ” ತತ್ವವನ್ನು ಸ್ಮರಿಸಿದ ಅವರು, ಮಾನವೀಯತೆ ಮತ್ತು ಸಮಾನತೆ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ವಿದ್ಯಾರ್ಥಿಗಳು ಕೇವಲ ಉದ್ಯೋಗ ಹುಡುಕುವವರಾಗದೆ, ಉದ್ಯೋಗ ಸೃಷ್ಟಿಕರ್ತರಾಗಬೇಕು ಮತ್ತು ಸ್ಟಾರ್ಟಪ್ ಸಂಸ್ಕೃತಿಗೆ ಉತ್ತೇಜನ ನೀಡಬೇಕು ಎಂದು ಹೇಳಿದರು.

ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾರತ ಸರ್ಕಾರದ ರಾಷ್ಟ್ರೀಯ ಶಿಕ್ಷಣ ತಂತ್ರಜ್ಞಾನ ವೇದಿಕೆಯ ಅಧ್ಯಕ್ಷರು ಹಾಗೂ ರಾಷ್ಟ್ರೀಯ ಮಾನ್ಯತಾ ಮಂಡಳಿಯ ಅಧ್ಯಕ್ಷರಾದ ಪ್ರೊ. ಅನಿಲ್ ಡಿ. ಸಹಸ್ರಬುದ್ಧೆ ಮಾತನಾಡುತ್ತಾ ಇಂದಿನ “ಗಿUಅಂ” ಜಗತ್ತಿನಲ್ಲಿ ನಿರಂತರ ಕಲಿಕೆಯ ಅಗತ್ಯತೆಯನ್ನು ವಿವರಿಸಿದರು.
ತಂತ್ರಜ್ಞಾನದ ಸದುಪಯೋಗದ ಮೂಲಕ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ತಮ್ಮನ್ನು ತಾವು ತೋರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅನೇಕ ಪದವೀಧರರು, ಶಿಕ್ಷಕರು ಹಾಗೂ ಗಣ್ಯರು ಭಾಗವಹಿಸಿದ್ದರು. ಘಟಿಕೋತ್ಸವವು ವಿದ್ಯಾರ್ಥಿಗಳಿಗೆ ಹೊಸ ಜೀವನದ ಹಾದಿಗೆ ದಾರಿ ತೋರಿಸುವ ಮಹತ್ವದ ಕ್ಷಣವಾಗಿ ಪರಿಣಮಿಸಿತು.
ರಾಜ್ಯದ ಉನ್ನತ ಶಿಕ್ಷಣ ಸಚಿವರು ಹಾಗೂ ಸಹ-ಕುಲಾಧಿಪತಿಗಳಾದ ಡಾ. ಎಂ. ಸಿ. ಸುಧಾಕರ್ ಮಾತನಾಡಿ ೩೫ ವರ್ಷಗಳಲ್ಲಿ ಸಾಕಷ್ಟು ಸಾಧನೆ ಮಾಡಿದರೂ ಇನ್ನೂ ಹಲವು ಶೈಕ್ಷಣಿಕ ಸವಾಲುಗಳನ್ನು ಎದುರಿಸುತ್ತಿದೆ ಎಂದು ಹೇಳಿದರು.
ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಸೂಚಿಸಿದರು.
ಎಂಜಿನಿಯರಿಂಗ್ ಪದವೀಧರರಲ್ಲಿ ಕೇವಲ ೧೭% ಮಂದಿಗೆ ಮಾತ್ರ ಉದ್ಯೋಗ ದೊರೆಯುತ್ತಿರುವುದು ಆತಂಕಕಾರಿ ಎಂದು ತಿಳಿಸಿ, ಸೀಟುಗಳ ನಿಯಂತ್ರಣ ಹಾಗೂ ಪಠ್ಯಕ್ರಮದಲ್ಲಿ ಬದಲಾವಣೆ ತರಲಾಗುತ್ತಿದೆ ಎಂದರು. ಬಿಎ ಕೋರ್ಸ್‌ಗಳಿಗೆ ದಾಖಲಾತಿ ಕಡಿಮೆಯಾಗುತ್ತಿರುವುದನ್ನೂ ಅವರು ಉಲ್ಲೇಖಿಸಿದರು.
ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಲು ಹೊಸ ಕೋರ್ಸ್‌ಗಳು, ಲ್ಯಾಬ್‌ಗಳು ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತಿದ್ದು, ಏಷ್ಯನ್ ಅಭಿವೃದ್ಧಿ ಬ್ಯಾಂಕ್‌ಸಹಯೋಗದಲ್ಲಿ ಯೋಜನೆಗಳು ಜಾರಿಯಲ್ಲಿವೆ ಎಂದರು. ಸ್ಟಾರ್ಟಪ್ ಉತ್ತೇಜನ, ಕ್ಯಾಂಪಸ್-ಟು-ಕೆರಿಯರ್ ಸಮ್ಮೇಳನ ಮತ್ತು ವೃತ್ತಿಪರ ತರಬೇತಿಗಳ ಮೂಲಕ ವಿದ್ಯಾರ್ಥಿಗಳನ್ನು ಉದ್ಯೋಗ ಮಾರುಕಟ್ಟೆಗೆ ಸಜ್ಜುಗೊಳಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ವರದಿ ವಾಚಿಸಿದರು.
ಕುಲಸಚಿವರಾದ ಹೇಮಂತ್ ಎನ್. ಹಾಗೂ ಕುಲಸಚಿವರು (ಮೌಲ್ಯಮಾಪನ) ಪ್ರೊ. ಆರ್. ತಿಮ್ಮರಾಯಪ್ಪ ಇತರೆ ಅಧಿಕಾರಿಗಳು, , ಗೌರವ ಡಾಕ್ಟರೇಟ್ ಪುರಸ್ಕೃತರು, ಪದವೀಧರರು ಇದ್ದರು.
“ನಾನು ಪ್ರತಿದಿನ ನಿಯಮಿತವಾಗಿ ಓದುತ್ತಿದ್ದೆ. ಸ್ಪರ್ಧೆಗಿಂತ ಸ್ವಂತ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದೇ ಮುಖ್ಯ ಎಂದು ನಂಬಿದ್ದೇನೆ. ಈ ಸಾಧನೆ ನನ್ನ ಕುಟುಂಬಕ್ಕೆ ಸಮರ್ಪಿತ.”
: ಅಭಿಷೇಕ್ ಎಚ್.ಎಂ. (10 ಗೋಲ್ಡ್ ಮೆಡಲ್)
“ಮಹಿಳೆಯರು ಯಾವ ಕ್ಷೇತ್ರದಲ್ಲೂ ಹಿಂದೆ ಇಲ್ಲ ಎನ್ನುವುದನ್ನು ತೋರಿಸಲು ಈ ಸಾಧನೆ ಒಂದು ಉದಾಹರಣೆ. ನಿರಂತರ ಪರಿಶ್ರಮವೇ ಯಶಸ್ಸಿನ ಗುಟ್ಟು.”
: ರಕ್ಷಾ (7 ಗೋಲ್ಡ್ ಮೆಡಲ್)
“ಪ್ರತಿ ವಿಷಯವನ್ನು ಅರ್ಥಮಾಡಿಕೊಂಡು ಕಲಿತದ್ದರಿಂದಲೇ ನನಗೆ ಈ ಮಟ್ಟದ ಸಾಧನೆ ಸಾಧ್ಯವಾಯಿತು. ಓದಿನ ಜೊತೆಗೆ ಸಮಯ ನಿರ್ವಹಣೆಯೂ ಮುಖ್ಯ.”
: ಸೃಷ್ಟಿ ಆರ್. (6 ಗೋಲ್ಡ್ ಮೆಡಲ್)
“ನಾನು ಗುರಿ ನಿಗದಿಪಡಿಸಿಕೊಂಡು ಅದಕ್ಕೆ ತಕ್ಕಂತೆ ಯೋಜನೆ ಮಾಡಿಕೊಂಡೆ. ಪ್ರತಿ ದಿನ ಸಣ್ಣ ಪ್ರಗತಿ ಮಾಡಿದರೆ ದೊಡ್ಡ ಫಲಿತಾಂಶ ಸಿಗುತ್ತದೆ.”
: ಸಹನಾ ಗಣೇಶ್ ಶೆಟ್ (5 ಗೋಲ್ಡ್ ಮೆಡಲ್)
“ಸಾಮಾಜಿಕ ವಿಷಯಗಳ ಬಗ್ಗೆ ಆಸಕ್ತಿ ನನ್ನನ್ನು ಹೆಚ್ಚು ಓದಲು ಪ್ರೇರೇಪಿಸಿತು. ಶಿಕ್ಷಕರ ಮಾರ್ಗದರ್ಶನ ಮಹತ್ವದ್ದಾಗಿದೆ.”
: ಸಜನಾ ಎಸ್. (5 ಗೋಲ್ಡ್ ಮೆಡಲ್)
“ವಿಫಲತೆಗಳು ನನಗೆ ಪಾಠ ಕಲಿಸಿವೆ. ಅವುಗಳನ್ನು ಸ್ವೀಕರಿಸಿ ಮುಂದುವರಿದರೆ ಯಶಸ್ಸು ಖಚಿತ.”
: ಚೈತ್ರ ಪಿ.ಪಾಟೀಲ್ (4 ಗೋಲ್ಡ್ ಮೆಡಲ್)
“ಕುಟುಂಬದ ಬೆಂಬಲ ಮತ್ತು ಆತ್ಮವಿಶ್ವಾಸವೇ ನನ್ನ ಶಕ್ತಿ. ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವುದು ಮುಖ್ಯ.”
: ಅನು ಆರ್.(3 ಗೋಲ್ಡ್ ಮೆಡಲ್)
