ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ಹೋಬಳಿಯ ಹಣಜಿ ಗ್ರಾಮದಲ್ಲಿ ಮೂರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಗರ್ಭಿಣಿ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.
ಮೃತರನ್ನು ಸ್ವಾತಿ (26) ಎಂದು ಗುರುತಿಸಲಾಗಿದೆ. ಅವರು ಶಿಕಾರಿಪುರ ಮೂಲದ ಯುವಕರೊಂದಿಗೆ ಸುಮಾರು ಮೂರು ತಿಂಗಳ ಹಿಂದೆ ವಿವಾಹವಾಗಿದ್ದು, ಗರ್ಭಿಣಿಯಾಗಿದ್ದರು ಎಂದು ತಿಳಿದುಬಂದಿದೆ. ಇತ್ತೀಚೆಗೆ ತವರು ಮನೆಯಲ್ಲಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಮಾಹಿತಿಯ ಪ್ರಕಾರ, ಸ್ವಾತಿಯವರ ತಂದೆ-ತಾಯಿ ಹೊಲಕ್ಕೆ ತೆರಳಿದ್ದ ಸಮಯದಲ್ಲಿ ಅವರು ಮನೆಯ ಕೋಣೆಯಲ್ಲಿ ಸೀರೆಯನ್ನು ಉರುಳಾಗಿ ಬಳಸಿಕೊಂಡು ನೇಣು ಬಿಗಿದುಕೊಂಡಿದ್ದಾರೆ. ಬಳಿಕ ಅಕ್ಕಪಕ್ಕದವರು ವಿಷಯ ತಿಳಿದು ಹೊಲದಲ್ಲಿದ್ದ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕಾಗಮಿಸಿದ ನೆರೆಹೊರೆಯವರು ಮನೆಯ ಬಾಗಿಲು ಮುರಿದು ಸ್ವಾತಿಯವರನ್ನು ರಕ್ಷಿಸಲು ಪ್ರಯತ್ನಿಸಿದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.
ಕುಟುಂಬದವರ ಮಾಹಿತಿ ಪ್ರಕಾರ, ಸ್ವಾತಿ ಕಳೆದ ಕೆಲ ದಿನಗಳಿಂದ ಆರೋಗ್ಯ ಸಮಸ್ಯೆ, ತೀವ್ರ ಹೊಟ್ಟೆನೋವು ಹಾಗೂ ನಿರಂತರ ವಾಂತಿಯಿಂದ ಬಳಲುತ್ತಿದ್ದರು. ಹೊಟ್ಟೆನೋವನ್ನು ತಾಳಲಾರದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
