ಇಂದಿನ ಕಾಲದಲ್ಲಿ ಮಾನವರ ನಡುವೆಯೇ ಸಂಬಂಧಗಳು ದೂರವಾಗುತ್ತಿರುವ ಸಂದರ್ಭದಲ್ಲೂ ಪ್ರಾಣಿಗಳ ನಡುವೆ ಕಂಡುಬರುವ ಪ್ರೀತಿ ಮತ್ತು ಕಾಳಜಿ ಅನೇಕ ಬಾರಿ ಮನಸ್ಸಿಗೆ ಹೊಸ ಭರವಸೆ ನೀಡುತ್ತವೆ. ಅಂತಹ ಅಪರೂಪದ ಮತ್ತು ಹೃದಯಸ್ಪರ್ಶಿ ದೃಶ್ಯವೊಂದು ಹೊಸನಗರ ತಾಲೂಕಿನ ಅರಸಾಳು ಗ್ರಾಮದಲ್ಲಿ ಅಪರೂಪದ ಘಟನೆ ಕಂಡುಬಂದಿದೆ.
ನೆಲದ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ನಾಯಿ ತನ್ನ ಮರಿಯಂತೆ ಬೆಕ್ಕಿನ ಮರಿಗೂ ಮಮತೆ ತೋರಿಸಿದ್ದು, ಹಸಿವಿನಿಂದ ಅದರ ಬಳಿ ಬಂದ ಬೆಕ್ಕಿನ ಮರಿಗೆ ಯಾವುದೇ ವಿರೋಧವಿಲ್ಲದೆ ಹಾಲು ಕುಡಿಯಲು ಅವಕಾಶ ನೀಡಿರುವ ದೃಶ್ಯ ಎಲ್ಲರ ಗಮನ ಸೆಳೆಯುತ್ತಿದೆ. ಸಾಮಾನ್ಯವಾಗಿ ನಾಯಿ ಮತ್ತು ಬೆಕ್ಕು ಎಂದರೆ ಪರಸ್ಪರ ಹೊಂದಾಣಿಕೆ ಕಡಿಮೆ ಎನ್ನುವ ಕಲ್ಪನೆ ಇದೆ. ಆದರೆ ಈ ದೃಶ್ಯ ಆ ಕಲ್ಪನೆಗೆ ವಿರುದ್ಧವಾಗಿ ಪ್ರಾಣಿಗಳಲ್ಲಿರುವ ಸಹಜ ಪ್ರೀತಿ, ಕರುಣೆ ಮತ್ತು ಸ್ವೀಕಾರ ಮನೋಭಾವವನ್ನು ತೋರಿಸಿದೆ.
ಬೆಕ್ಕಿನ ಮರಿ ಕೂಡ ಯಾವುದೇ ಭಯವಿಲ್ಲದೆ ನಾಯಿಯ ಬಳಿ ಸೇರಿ ಹಾಲು ಕುಡಿಯುತ್ತಿರುವುದು, ಪ್ರಾಣಿಗಳ ನಡುವಿನ ನಂಬಿಕೆ ಮತ್ತು ಭಾವನಾತ್ಮಕ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಹಸಿವು, ಮಮತೆ ಮತ್ತು ಆರೈಕೆ ಎಂಬ ಭಾವನೆಗಳಿಗೆ ಜಾತಿ ಅಥವಾ ಪ್ರಭೇದದ ಅಂತರವಿಲ್ಲ ಎಂಬ ಸಂದೇಶವನ್ನು ಈ ಅಪರೂಪದ ಕ್ಷಣ ಸಾರುತ್ತಿದೆ.
ಈ ದೃಶ್ಯ ನೋಡಿದವರಿಗೆ “ತಾಯಿತನ ಎಂದಿಗೂ ಒಂದೇ ? ಅದು ಜೀವಿಯ ರೂಪವನ್ನು ನೋಡುವುದಿಲ್ಲ” ಎಂಬ ಸಂದೇಶ ನೀಡುವಂತಿದೆ. ಪ್ರೀತಿ, ಕಾಳಜಿ ಮತ್ತು ಸಹಬಾಳ್ವೆಯ ಮೌಲ್ಯಗಳನ್ನು ನೆನಪಿಸುವ ಈ ದೃಶ್ಯ ಮೆಚ್ಚುಗೆಗೆ ಪಾತ್ರವಾಗುವಂತಹದ್ದಾಗಿದೆ.
