ಶಿವಮೊಗ್ಗ, : ನಗರದ ತುಂಗಾ ಹಳೇ ಸೇತುವೆ ಮೇಲಿನಿಂದ ಗುರುವಾರ ಸಂಜೆ ಮಹಿಳೆಯೊಬ್ಬರು ತುಂಗಾ ನದಿಗೆ ಹಾರಿರುವ ಘಟನೆ ನಡೆದಿದ್ದು, ಆಕೆಯ ಪತ್ತೆಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.
ನಗರದ ಬಸ್ ನಿಲ್ದಾಣದ ಸಮೀಪವಿರುವ ತುಂಗಾ ಹಳೇ ಸೇತುವೆ ಬಳಿ ಈ ಘಟನೆ ನಡೆದಿದೆ. ಮಹಿಳೆ ನದಿಗೆ ಹಾರಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ ವೇಳೆ ಮಹಿಳೆಯ ಮೊಬೈಲ್ ಫೋನ್ ಹಾಗೂ ವೇಲ್ ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಆದರೆ ನದಿಗೆ ಹಾರಿದ ಮಹಿಳೆಯ ಗುರುತು ಈವರೆಗೆ ಪತ್ತೆಯಾಗಿಲ್ಲ.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ನದಿಯಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದರೂ ಸಂಜೆ ವೇಳೆಯವರೆಗೆ ಮಹಿಳೆ ಅಥವಾ ಮೃತದೇಹ ಪತ್ತೆಯಾಗಲಿಲ್ಲ. ಕತ್ತಲೆ ಆವರಿಸಿದ್ದರಿಂದ ಶೋಧ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಶುಕ್ರವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಹಿಳೆಯ ಗುರುತು ಹಾಗೂ ಘಟನೆಯ ಹಿನ್ನೆಲೆ ಕುರಿತು ತನಿಖೆ ಮುಂದುವರಿಸಿದ್ದಾರೆ.
