
ಶಿವಮೊಗ್ಗ : ಪರಿಸರ ಸಂರಕ್ಷಣೆ, ಸಾಮಾಜಿಕ ಅರಣ್ಯ, ಹವಾಮಾನ ಬದಲಾವಣೆ ಜಾಗೃತಿ ಹಾಗೂ ಯುವಜನರ ಸಬಲೀಕರಣದ ದಿಸೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಗ್ರೋ ಗ್ರೀನ್ ಅಸೋಸಿಯೇಷನ್ ತನ್ನ ದಶಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ಗ್ರೀನ್ ಇಂಪ್ಯಾಕ್ಟ್ ಸಮ್ಮಿಟ್–2026 ಹಾಗೂ ಗ್ರೀನ್ ಶಾರ್ಕ್ ಟ್ಯಾಂಕ್ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಸರ ಸ್ನೇಹಿ ಹಾಗೂ ಸಾಮಾಜಿಕ ಪರಿಣಾಮ ಮೂಡಿಸುವ ನವೋದ್ಯಮ ಪರಿಕಲ್ಪನೆಗಳಿಗೆ ವಿಶೇಷ ವೇದಿಕೆ ಕಲ್ಪಿಸಲಾಯಿತು. ಗ್ರೀನ್ ಶಾರ್ಕ್ ಟ್ಯಾಂಕ್‌ನಲ್ಲಿ ವಿವಿಧ ಕ್ಷೇತ್ರಗಳ ಉದ್ಯಮಿಗಳು, ತಂತ್ರಜ್ಞರು ಮತ್ತು ಹೂಡಿಕೆದಾರರು ಭಾಗವಹಿಸಿ ಯುವಕರ ಆಲೋಚನೆಗಳನ್ನು ಮೌಲ್ಯಮಾಪನ ಮಾಡಿದರು.

ಒಟ್ಟು 19 ತಂಡಗಳು ತಮ್ಮ ನವೀನ ಉದ್ಯಮ ಪರಿಕಲ್ಪನೆಗಳನ್ನು ಮಂಡಿಸಿದ್ದು, ಅವುಗಳಲ್ಲಿ ಮೂರು ತಂಡಗಳನ್ನು ಇನ್‌ಕ್ಯುಬೇಷನ್ ಹಾಗೂ ಮುಂದಿನ ಮಾರ್ಗದರ್ಶನಕ್ಕಾಗಿ ಆಯ್ಕೆ ಮಾಡಲಾಯಿತು.
ಕಾರ್ಯಕ್ರಮವನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ. ಜಗದೀಶ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶಶಾಂಕ್ ಹೆಚ್.ಎಸ್. ಹಾಗೂ ಡಾ. ರಾಘವೇಂದ್ರ ಮೇಸ್ತ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರೋ ಗ್ರೀನ್ ಅಸೋಸಿಯೇಷನ್ ಅಧ್ಯಕ್ಷೆ ನಿರಂಜನಿ ರವೀಂದ್ರ, ಹತ್ತು ವರ್ಷಗಳ ಪಯಣವು ಕೇವಲ ಸಾಧನೆಯ ನೆನಪು ಅಲ್ಲ, ಹೊಸ ಕನಸುಗಳ ಆರಂಭವಾಗಿದೆ ಎಂದರು. ಗ್ರೀನ್ ಶಾರ್ಕ್ ಟ್ಯಾಂಕ್ ಮೂಲಕ ಪರಿಸರ ಹಾಗೂ ಸಮಾಜಕ್ಕೆ ಮೌಲ್ಯ ಸೃಷ್ಟಿಸುವ ಯುವಕರ ಆಲೋಚನೆಗಳಿಗೆ ಹೂಡಿಕೆ, ಮಾರ್ಗದರ್ಶನ ಮತ್ತು ಅವಕಾಶ ಕಲ್ಪಿಸುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.
ಗ್ರೋ ಗ್ರೀನ್ ಅಸೋಸಿಯೇಷನ್ ಕಳೆದ ದಶಕದಲ್ಲಿ ಸಸಿ ನೆಡುವಿಕೆ, ಪರಿಸರ ಜಾಗೃತಿ, ತ್ಯಾಜ್ಯ ನಿರ್ವಹಣೆ, ಕೈದಿಗಳಿಗೆ ಕೌಶಲ್ಯಾಭಿವೃದ್ಧಿ ಹಾಗೂ ಹವಾಮಾನ ಬದಲಾವಣೆ ಕುರಿತ ಹಲವು ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಕೊಡುಗೆ ನೀಡಿದೆ ಎಂದು ತಿಳಿಸಿದರು.
