ಶಿವಮೊಗ್ಗ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವೈಯಕ್ತಿಕ ಸಹಾಯಕ (ಪಿ.ಎ.) ಎಂದು ಸುಳ್ಳು ಪರಿಚಯ ಮಾಡಿಕೊಂಡು ರಿಕ್ರಿಯೇಷನ್ ಕ್ಲಬ್ ಲೈಸೆನ್ಸ್ ಕೊಡಿಸುವುದಾಗಿ ನಂಬಿಸಿ ₹15 ಲಕ್ಷ ವಂಚನೆ ಮಾಡಿದ ಆರೋಪದಡಿ ತುಂಗಾನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಶಿವಮೊಗ್ಗದ ಕೆಎಚ್‌ಬಿ ಕಾಲೋನಿ ನಿವಾಸಿ ಹಾಗೂ ರೈತ ಮಂಜುನಾಥ ಹಂಜಿ ಅವರು ನೀಡಿದ ದೂರಿನ ಆಧಾರದ ಮೇಲೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಪ್ರಮುಖ ಆರೋಪಿ ಹೇಮಂತ್ ಕುಮಾರ್ ಅಲಿಯಾಸ್ ಗಣೇಶ್ ಎಂಬಾತ ತಾನು ಮುಖ್ಯಮಂತ್ರಿ ಅವರ ಪಿಎ ಎಂದು ಹೇಳಿಕೊಂಡು, ರಿಕ್ರಿಯೇಷನ್ ಕ್ಲಬ್ ಲೈಸೆನ್ಸ್ ಕೊಡಿಸುವುದಾಗಿ ಭರವಸೆ ನೀಡಿ ದೂರುದಾರರಿಂದ ಹಂತ ಹಂತವಾಗಿ ಒಟ್ಟು ₹15 ಲಕ್ಷ ಹಣ ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿ ಫೋನ್‌ಪೇ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಲ್ಲದೆ, ಶಿವಮೊಗ್ಗದ ಸಾಯಿ ಇಂಟರ್‌ನ್ಯಾಷನಲ್ ಹೋಟೆಲ್ ಹಾಗೂ ವಡ್ಡಿನಕೊಪ್ಪದಲ್ಲಿ ನಗದು ರೂಪದಲ್ಲಿಯೂ ಹಣ ಪಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಬಳಿಕ ಲೈಸೆನ್ಸ್ ಕೊಡಿಸದೇ ಹಣದೊಂದಿಗೆ ತಲೆಮರೆಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿತ್ತು.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ತುಂಗಾನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಇದೇ ರೀತಿಯ ಅಧಿಕಾರಿಗಳ ಹೆಸರು ಬಳಸಿಕೊಂಡು ವಂಚನೆ ಮಾಡುವ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.
