ಶಿವಮೊಗ್ಗ: ನಗರದ ಜೆಎನ್ಎನ್ ಇಂಜಿನಿಯರಿಂಗ್ ಕಾಲೇಜಿನ ಇನ್ಫಾರ್ಮೇಷನ್ ಸೈನ್ಸ್ ವಿಭಾಗ ಹಾಗೂ ಐಇಇಇ ಕಂಪ್ಯೂಟರ್ ಸೊಸೈಟಿ ವಿದ್ಯಾರ್ಥಿ ಘಟಕದ ಸಹಯೋಗದಲ್ಲಿ ಜುಲೈ 24 ಮತ್ತು 25ರಂದು ‘ಯುಗ್ಮಾ ಟೆಕ್ಫೆಸ್ಟ್-2.0 ಮೇದದೃಷ್ಟಿ’ ರಾಷ್ಟ್ರಮಟ್ಟದ ಕೃತಕ ಬುದ್ಧಿಮತ್ತೆ (ಎಐ) ಹ್ಯಾಕಥಾನ್ ಆಯೋಜಿಸಲಾಗುತ್ತಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ವೈ. ವಿಜಯಕುಮಾರ್ ತಿಳಿಸಿದ್ದಾರೆ.
ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಂತ್ರಜ್ಞಾನ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ಕೃತಕ ಬುದ್ಧಿಮತ್ತೆಯ ಬಳಕೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು, ಅವರಲ್ಲಿ ಸೃಜನಶೀಲ ಚಿಂತನೆ, ಸಂಶೋಧನಾ ಮನೋಭಾವ ಹಾಗೂ ನೈಜ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವನ್ನು ಬೆಳೆಸುವುದು ಹ್ಯಾಕಥಾನ್ನ ಪ್ರಮುಖ ಉದ್ದೇಶವಾಗಿದೆ ಎಂದರು.
ಎರಡು ದಿನಗಳ ಕಾಲ ನಿರಂತರವಾಗಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ಕರ್ನಾಟಕ ಸೇರಿದಂತೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ವಿವಿಧ ರಾಜ್ಯಗಳ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ತಂಡಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಹ್ಯಾಕಥಾನ್ನಲ್ಲಿ ವಿದ್ಯಾರ್ಥಿಗಳಿಗೆ ಎರಡು ಪ್ರಮುಖ ವಿಷಯಗಳ ಕುರಿತು ಸವಾಲುಗಳನ್ನು ನೀಡಲಾಗುತ್ತದೆ. ಮೊದಲ ವಿಭಾಗದಲ್ಲಿ ‘ಕೃತಕ ಬುದ್ಧಿಮತ್ತೆ ಮೂಲಕ ವೈದ್ಯಕೀಯ ಚಿತ್ರಗಳ ವಿಶ್ಲೇಷಣೆ ಮತ್ತು ಸುಧಾರಣೆ’ ಎಂಬ ವಿಷಯದಡಿ ಎಕ್ಸ್-ರೇ, ಎಂಆರ್ಐ ಹಾಗೂ ಸಿಟಿ ಸ್ಕ್ಯಾನ್ಗಳಂತಹ ವೈದ್ಯಕೀಯ ಚಿತ್ರಗಳನ್ನು ವಿಶ್ಲೇಷಿಸಿ ರೋಗ ಪತ್ತೆ, ಅಂಗಾಂಗಗಳ ಗುರುತಿಸುವಿಕೆ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಹಕಾರಿಯಾಗುವ ನವೀನ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಸವಾಲು ಇರಲಿದೆ.
ಎರಡನೇ ವಿಭಾಗದಲ್ಲಿ ‘ಕೃತಕ ಬುದ್ಧಿಮತ್ತೆ ಆಧಾರಿತ ವಸ್ತು ಗುರುತಿಸುವಿಕೆ ತಂತ್ರಜ್ಞಾನ’ ವಿಷಯದಡಿ ನೈಜ ಪರಿಸರದಲ್ಲಿರುವ ವಸ್ತುಗಳನ್ನು ಗುರುತಿಸುವ ಹಾಗೂ ವರ್ಗೀಕರಿಸುವ ಬುದ್ಧಿವಂತ ವ್ಯವಸ್ಥೆಗಳನ್ನು ರೂಪಿಸುವ ಸವಾಲು ನೀಡಲಾಗುತ್ತದೆ. ಸ್ವಯಂಚಾಲಿತ ವಾಹನಗಳು, ಭದ್ರತಾ ವ್ಯವಸ್ಥೆಗಳು, ಕೈಗಾರಿಕಾ ಗುಣಮಟ್ಟ ಪರಿಶೀಲನೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಉಪಯುಕ್ತವಾಗುವ ಪರಿಹಾರಗಳನ್ನು ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಲಿದ್ದಾರೆ.
ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ತಂಡಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳ ರೂಪದಲ್ಲಿ ಒಟ್ಟು ಸುಮಾರು ₹2 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಜುಲೈ 24ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿ ಎಸ್. ರುದ್ರೇಗೌಡ ಅವರು ಚಾಲನೆ ನೀಡಲಿದ್ದು, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಎನ್ಇಎಸ್ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಜುಲೈ 25ರಂದು ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಧ್ಯಾಪಕಿ ಡಾ. ಅರ್ಚನಾ ಮತೂರ್ ಸಮಾರೋಪ ಭಾಷಣ ಮಾಡಲಿದ್ದಾರೆ. ಎನ್ಇಎಸ್ ಸಹ ಕಾರ್ಯದರ್ಶಿ ಡಾ. ಪಿ. ನಾರಾಯಣ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಡಾ. ವೈ. ವಿಜಯಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಸಂಘಟನಾ ಸಮಿತಿ ಸದಸ್ಯರಾದ ಡಾ. ರಾಘವೇಂದ್ರ ಆರ್.ಜೆ., ಡಾ. ಪವನ್ ಕುಮಾರ್ ಎಂ.ಪಿ., ಡಾ. ಸಂಜೀವ್ ಕುಂಟೆ, ಅರುಣ್ ಕುಮಾರ್ ಪಿ., ಮನೀಷಾ ಕೆ.ಎಂ. ಹಾಗೂ ವಿಶೃತ ರಾಣಿ ಎಸ್.ಎನ್. ಉಪಸ್ಥಿತರಿದ್ದರು.
