ಶಿವಮೊಗ್ಗ : ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡ ಬೆನ್ನಲ್ಲೇ, ಜಲಪಾತಗಳನ್ನು ವೀಕ್ಷಿಸಲು ಬರುತ್ತಿರುವ ಕೆಲವು ಪ್ರವಾಸಿಗರ ಹುಚ್ಚಾಟ ಮಿತಿಮೀರಿದೆ. ವಿಶ್ವವಿಖ್ಯಾತ ಜೋಗ ಜಲಪಾತದ ನಿರ್ಬಂಧಿತ ವಲಯವಾದ ರಾಜಾ ಫಾಲ್ಸ್ ಬಳಿ ಅಕ್ರಮವಾಗಿ ಪ್ರವೇಶಿಸಿ, ಅಪಾಯಕಾರಿ ಕಲ್ಲುಬಂಡೆಗಳ ಮೇಲೆ ನಿಂತು ವೀಡಿಯೋ ಚಿತ್ರೀಕರಣ ಮಾಡಿದ ಯೂಟ್ಯೂಬರ್ ಸೇರಿದಂತೆ ಮೂವರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಾಯಕಾರಿ ಜಾಗದಲ್ಲಿ ವೀಡಿಯೋ ಮಾಡಿ ಜಾಲತಾಣಕ್ಕೆ ಅಪ್‌ಲೋಡ್ ಮಾಡಿದ್ದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಜೋಗಿನಕೊಪ್ಪ ಮೂಲದ ಯುವಕರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಗಳನ್ನು ಮೋಹನ ಶುಭಕರ ಗೌಡ (26 ವರ್ಷ), ಭರತ ಗೌಡ (27 ವರ್ಷ) ಹಾಗೂ ಮದನ ಗೌಡ ಎಂದು ಗುರುತಿಸಲಾಗಿದೆ.
ಮಳೆಗಾಲದ ಸಮಯದಲ್ಲಿ ಜಲಪಾತಗಳ ಬಳಿ ಬಂಡೆಗಳು ಅತ್ಯಂತ ನುಣುಪಾಗಿದ್ದು, ಸಣ್ಣ ನಿರ್ಲಕ್ಷ್ಯವೂ ಪ್ರಾಣಕ್ಕೆ ಕುತ್ತು ತರಬಹುದು. ಆದ್ದರಿಂದ ಪ್ರವಾಸಿಗರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ನಿಷೇಧಿತ ಪ್ರದೇಶಗಳಿಗೆ ಇಳಿಯಬಾರದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
