ಶಿವಮೊಗ್ಗ, : ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಡಿಕಲ್ ಗ್ರಾಮದ ಸರ್ಕಲ್ ಸಮೀಪ ದನ ಕಳ್ಳತನಕ್ಕೆ ಯತ್ನಿಸಿದ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಜೂನ್ 10ರಂದು ರಾತ್ರಿ ವೇಳೆ ದುಷ್ಕರ್ಮಿಗಳು ಕಾರಿನಲ್ಲಿ ಬಂದು ರಸ್ತೆ ಬದಿಯಲ್ಲಿ ಮಲಗಿದ್ದ ದನಗಳನ್ನು ಕಳ್ಳತನ ಮಾಡಲು ಯತ್ನಿಸಿರುವ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 175/2026 ಅಡಿಯಲ್ಲಿ ಬಿಎನ್ಎಸ್-2023ರ ಕಲಂ 303(2), 62ರಂತೆ ಪ್ರಕರಣ ದಾಖಲಾಗಿತ್ತು.
ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ, ತೀರ್ಥಹಳ್ಳಿ ಉಪವಿಭಾಗದ ಡಿವೈಎಸ್ಪಿ ಅರವಿಂದ ಕಲಗುಂಜಿ ಅವರ ಸೂಚನೆಯಂತೆ ವಿಶೇಷ ತಂಡ ರಚಿಸಿ ತನಿಖೆ ಕೈಗೊಳ್ಳಲಾಯಿತು.
ತೀರ್ಥಹಳ್ಳಿ ಪೊಲೀಸ್ ಠಾಣೆ ನಿರೀಕ್ಷಕ ಇಮ್ರಾನ್ ಬೇಗ್ ನೇತೃತ್ವದಲ್ಲಿ ಪಿಎಸ್ಐ ಆರ್. ಸುಷ್ಮಾ, ಪ್ರೋಬೇಷನರಿ ಪಿಎಸ್ಐ ಯುವರಾಜ್ ರಾಠೋಡ್ ಹಾಗೂ ಸಿಬ್ಬಂದಿಗಳ ತಂಡ ಆರೋಪಿಗಳು ಮತ್ತು ಕೃತ್ಯಕ್ಕೆ ಬಳಸಿದ ವಾಹನದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿತು.
ತನಿಖೆ ವೇಳೆ ಟಿಪ್ಪುನಗರದ ರೋಷನ್ ಬೇಗ್ ಹಾಗೂ ಇಮ್ರಾನ್ ಅವರನ್ನು ಜೂನ್ 15ರಂದು ವಶಕ್ಕೆ ಪಡೆದು ಬಂಧಿಸಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕೆಎ-01-ಎಂಜೆ-9174 ಸಂಖ್ಯೆಯ ಎರ್ಟಿಗಾ ಕಾರನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಮೌಲ್ಯ ಸುಮಾರು ₹4 ಲಕ್ಷ ಎಂದು ಅಂದಾಜಿಸಲಾಗಿದೆ.
ಪ್ರಕರಣವನ್ನು ಯಶಸ್ವಿಯಾಗಿ ಪತ್ತೆಹಚ್ಚಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದಿಸಿದ್ದಾರೆ.
Subscribe to Updates
Get the latest creative news from FooBar about art, design and business.
ದನ ಕಳ್ಳತನ ಯತ್ನ ಪ್ರಕರಣ ಭೇದಿಸಿದ ತೀರ್ಥಹಳ್ಳಿ ಪೊಲೀಸರು: ಕಾರು ವಶ, ಇಬ್ಬರು ಆರೋಪಿಗಳ ಬಂಧನ
Thirthahalli police crack attempted cattle theft case
