ಶಿವಮೊಗ್ಗ: ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಇಂಡೇನ್ ಗ್ಯಾಸ್ ರಿಫಿಲ್ಲಿಂಗ್ ಘಟಕಕ್ಕೆ ತೆರಳುತ್ತಿದ್ದ ಎಲ್ಪಿಜಿ (LPG) ಗ್ಯಾಸ್ ತುಂಬಿದ ಟ್ಯಾಂಕರ್ ಲಾರಿಯೊಂದು ನಗರದ ಡೈರಿ ಸರ್ಕಲ್ ಸಮೀಪ ಕೆಸರಿನಲ್ಲಿ ಸಿಲುಕಿಕೊಂಡ ಘಟನೆ ಬುಧವಾರ ನಡೆದಿದೆ. ಗ್ಯಾಸ್ ತುಂಬಿದ ಟ್ಯಾಂಕರ್ ಸಿಲುಕಿರುವುದರಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಮಂಗಳೂರಿನಿಂದ ಇಂಡೇನ್ ಗ್ಯಾಸ್ ರಿಫಿಲ್ಲಿಂಗ್ ಘಟಕದತ್ತ ಸಾಗುತ್ತಿದ್ದ ಟ್ಯಾಂಕರ್, ಡೈರಿ ಸರ್ಕಲ್ ಬಳಿಯ ಸರ್ವಿಸ್ ರಸ್ತೆಯಲ್ಲಿ ಮಳೆಯಿಂದ ಉಂಟಾದ ಕೆಸರಿನಲ್ಲಿ ಸಿಲುಕಿಕೊಂಡಿದೆ. ಟ್ಯಾಂಕರ್ ಅನ್ನು ಹೊರತೆಗೆಯಲು ಕ್ರೇನ್ ಬಳಸಿ ಪ್ರಯತ್ನಿಸಿದರೂ ಆರಂಭಿಕ ಹಂತದಲ್ಲಿ ಯಶಸ್ಸು ದೊರಕಿಲ್ಲ ಎಂದು ತಿಳಿದುಬಂದಿದೆ.
ಸುರಕ್ಷತಾ ದೃಷ್ಟಿಯಿಂದ ಇಂಡೇನ್ ಕಂಪನಿಯ ಅಗ್ನಿಶಾಮಕ ವಾಹನವನ್ನು ಸ್ಥಳದಲ್ಲೇ ನಿಯೋಜಿಸಲಾಗಿದ್ದು, ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗ್ಯಾಸ್ ತುಂಬಿದ ಟ್ಯಾಂಕರ್ ಆಗಿರುವುದರಿಂದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದು, ಅಧಿಕಾರಿಗಳು ಪರಿಸ್ಥಿತಿಯನ್ನು ನಿಗಾ ವಹಿಸಿದ್ದಾರೆ.
ಮಾಚೇನಹಳ್ಳಿಯ ಇಂಡೇನ್ ರಿಫಿಲ್ಲಿಂಗ್ ಘಟಕದಿಂದ ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲಿನ ಸುಮಾರು ಹತ್ತು ಜಿಲ್ಲೆಗಳಿಗೆ ಗೃಹಬಳಕೆಯ ಗ್ಯಾಸ್ ಸಿಲಿಂಡರ್ಗಳನ್ನು ಪೂರೈಕೆ ಮಾಡಲಾಗುತ್ತದೆ. ಹೀಗಾಗಿ ಈ ಮಾರ್ಗದಲ್ಲಿ ಟ್ಯಾಂಕರ್ಗಳ ಸಂಚಾರ ನಿರಂತರವಾಗಿರುತ್ತದೆ.
ಡೈರಿ ಸರ್ಕಲ್ ಬಳಿಯ ಅಂಡರ್ಪಾಸ್ ಕಾಮಗಾರಿ ಕಳೆದ ಐದು ವರ್ಷಗಳಿಂದ ಪೂರ್ಣಗೊಳ್ಳದೇ ಇರುವುದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪೂರ್ಣ ಸರ್ವಿಸ್ ರಸ್ತೆ, ಮಳೆ ನೀರು ಹಾಗೂ ಕೆಸರು ಕಾರಣದಿಂದಾಗಿ ಈ ಪ್ರದೇಶದಲ್ಲಿ ಆಗಾಗ ವಾಹನಗಳು ಸಿಲುಕುವುದು ಮತ್ತು ಅಪಘಾತಗಳು ಸಂಭವಿಸುವುದು ಸಾಮಾನ್ಯವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
