ಶಿವಮೊಗ್ಗ : ಮೈದಾನದಲ್ಲಿ ಕುಳಿತು ಕ್ರಿಕೆಟ್ ಪಂದ್ಯ ವೀಕ್ಷಿಸುವಂತಹ (ಫ್ಯಾನ್ ಪಾರ್ಕ್) ಅನುಭವ ನೀಡುವ ಐಪಿಎಲ್ ಫ್ಯಾನ್ ಪಾರ್ಕ್ನ್ನು ಶಿವಮೊಗ್ಗದಲ್ಲಿ ಮೇ16ರಂದು ಸಂಜೆ 6.30ಕ್ಕೆ ಎನ್ಇಎಸ್ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಐಪಿಎಲ್ ಶಿವಮೊಗ್ಗ ವಿಭಾಗದ ಸಂಚಾಲಕ ನಾಗೇಂದ್ರ ಪಂಡಿತ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎನ್ಇಎಸ್ ಮೈದಾನದಲ್ಲಿ ಫ್ಯಾನ್ ಪಾರ್ಕ್ ಸ್ಥಾಪನೆಗಾಗಿ ಸಿದ್ಧತೆ ಮಾಡಲಾಗಿದೆ. ಮೇ16ಸಂಜೆ ನಡೆಯುವ ಐಪಿಎಲ್ ಮ್ಯಾಚ್ಗಳನ್ನು ದೊಡ್ಡ ಸ್ಕ್ರೀನ್ನಲ್ಲಿ ತೋರಿಸಲಾಗುತ್ತಿದೆ. ಸುಮಾರು ೫ ಸಾವಿರ ನೋಡುಗರು ಇಲ್ಲಿಗೆ ಬರುವ ಸಾಧ್ಯತೆ ಇದೆ ಎಂದರು. ಬಹಳಷ್ಟು ಜನರು ಕ್ರಿಕೆಟ್ ಮ್ಯಾಚ್ ನೋಡಲು ಕ್ರೀಡಾಂಗಣಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಅವರಿಗೆಲ್ಲಾ ಕ್ರೀಡಾಂಗಣದಲ್ಲೇ ಕುಳಿತು ನೋಡಿದ ಅನುಭವವಾಗುವಂತೆ ಈ ಫ್ಯಾನ್ ಪಾರ್ಕ್ನ್ನು ಸಿದ್ಧಪಡಿಸಲಾಗಿದೆ. ಇಲ್ಲಿ ಆಸನದ ವ್ಯವಸ್ಥೆ ಇರುವುದಿಲ್ಲ. ಜಮಖಾನದಲ್ಲಿ ಕುಳಿತುಕೊಂಡು ಅಥವಾ ಜನ ನಿಂತುಕೊಂಡೇ ಕ್ರಿಕೆಟ್ ಪಂದ್ಯದ ನೇರ ಪ್ರಸಾರವನ್ನು ಆನಂದಿಸಬೇಕು. ಕ್ರಿಕೆಟ್ ವೀಕ್ಷಣೆ ಜೊತೆಗೆ ಆಹಾರ ಮಳಿಗೆ, ಗೇಮ್ ಜೋನ್ ಇತ್ಯಾದಿಗಳು ಇರುತ್ತವೆ. ಈಗಾಗಲೇ ಹಲವು ನಗರಗಳಲ್ಲಿ ಈ ರೀತಿಯ ಆಯೋಜನೆ ಮಾಡಲಾಗಿದ್ದು, ಕ್ರಿಕೆಟ್ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಸಾರ್ವಜನಿಕರಿಗೆ ಮುಕ್ತ ಅವಕಾಶವಿರುತ್ತದೆ. ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ದೊಡ್ಡ ಪರದೆಗಳಲ್ಲಿ ತೋರಿಸುವುದರಿಂದ ಕ್ರೀಡಾಂಗಣದ ಅನುಭವವೇ ನೋಡುಗರಿಗೆ ದೊರಕುತ್ತದೆ. ಸಾಕಷ್ಟು ಮೋಜು, ಮಸ್ತಿ ಕೂಡಾ ಇರುತ್ತದೆ. ಕ್ರೀಡಾಂಗಣದಲ್ಲಿ ಪ್ರೇಕ್ಷಕರು ನೋಡುವಂತೆ ಇಲ್ಲಿಯೂ ಕೂಡಾ ಸಿಳ್ಳೆ, ಪ್ರೋತ್ಸಾಹ, ಮುಖಕ್ಕೆ ಪೇಂಟಿಂಗ್ ಹಚ್ಚಿಕೊಂಡವರು, ಘೋಷಣೆಗಳು, ಸಾಹಸಮಯ ಸ್ಟಂಟ್ಗಳು ಎಲ್ಲವೂ ಇರುತ್ತವೆ. ಅಲ್ಲದೆ, ಫ್ಯಾನ್ ಪಾರ್ಕ್ನ ಅಭಿಮಾನಿಗಳಿಗೆ ಹಲವು ಕೊಡುಗೆಗಳು ಕೂಡಾ ಇರುತ್ತದೆ. ಲಕ್ಕಿ ಡ್ರಾ ಕೂಡಾ ಇರುತ್ತದೆ. ಇದೊಂದು ಅದ್ಭುತದ ಕ್ಷಣವಾಗಿದ್ದು, ಶಿವಮೊಗ್ಗದ ಕ್ರಿಕೆಟ್ ಪ್ರೇಮಿಗಳು ಇದರ ಸದುಪಯೋಗಪಡಿಸಿಕೊಳ್ಳಲು ಕೋರಿದರು.
ಈ ಫ್ಯಾನ್ ಪಾರ್ಕ್ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಶಿವಮೊಗ್ಗ ಘಟಕ, ಟಾಟಾ ಐಪಿಎಲ್ನವರ ಸಹಕಾರದಲ್ಲಿ ನಡೆಯುತ್ತಿದೆ. ಆ ದಿನ ಕೆಕೆಆರ್ ಮತ್ತು ಜಿಟಿ ನಡುವೆ ಹಾಗೂ ಪಂಜಾಬ್ ಕಿಂಗ್ಸ್ ಮತ್ತು ಆರ್ಸಿಬಿ ನಡುವೆ ಹಾಗೂ ಡೆಲ್ಲಿ ಕ್ಯಾಪ್ಟನ್ಸ್, ಆರ್ಆರ್ ಪಂದ್ಯಗಳು ನಡೆಯಲಿದ್ದು, ಅವುಗಳ ನೇರ ಪ್ರಸಾರ ತೋರಿಸಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಬಿಸಿಯ ಮಾಧ್ಯಮ ಪ್ರಮುಖ್ ರಾಘವೇಂದ್ರ, ಯೋಗೇಂದ್ರ ಇದ್ದರು.
