ಶಿವಮೊಗ್ಗ, ಏಪ್ರಿಲ್ 25: ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮನಕಟ್ಟೆ ಚಾನಲ್ ಪ್ರದೇಶದ ಬಳಿ ಮಂಗಳಮುಖಿಯೊಬ್ಬರ ಮೇಲೆ ನಡೆದ ದರೋಡೆ ಪ್ರಕರಣವನ್ನು ಪೊಲೀಸರು ಶೀಘ್ರವೇ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏಪ್ರಿಲ್ 24ರ ರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಮಂಗಳಮುಖಿಯನ್ನು ಆಟೋದಲ್ಲಿ ಕರೆದುಕೊಂಡು ಹೋಗಿ, 4,000 ರೂ. ನಗದು, ಮೊಬೈಲ್, ಕೊರಳ ಚೈನ್ ಹಾಗೂ ಬಂಗಾರದ ಉಂಗುರ ಕಿತ್ತುಕೊಂಡು ಪರಾರಿಯಾಗಿದ್ದ. ಈ ಕುರಿತು ಏಪ್ರಿಲ್ 25ರಂದು ದೂರು ದಾಖಲಾಗಿದ್ದು, ವಿನೋಬನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 82/2026, ಬಿಎನ್ಎಸ್ ಕಲಂ 309(4) ರೀತ್ಯಾ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ತನಿಖೆಗೆ ಪೊಲೀಸ್ ಅಧೀಕ್ಷಕ ನಿಖಿಲ್ ಬಿ. ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ ಎ.ಜಿ. ಹಾಗೂ ಡಿವೈಎಸ್ಪಿ ಸಂಜೀವ್ ಕುಮಾರ್ ಟಿ.ಡಿ. ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಪೊಲೀಸ್ ಇನ್ಸ್‌ಪೆಕ್ಟರ್ ಸುರೇಶ್ ಅವರ ಉಸ್ತುವಾರಿಯಲ್ಲಿ ಪಿಎಸ್ಐ ತಿರುಮಲೇಶ್ ಜಿ. ಮತ್ತು ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿದರು.
ತನಿಖಾ ತಂಡವು ಆರೋಪಿತ ದೇವರಾಜ (27), ಹಳೆ ಮಂಡ್ಲಿ, ಶಿವಮೊಗ್ಗ ನಿವಾಸಿಯನ್ನು ಪ್ರಕರಣ ದಾಖಲಾದ 12 ಗಂಟೆಯೊಳಗೆ ಬಂಧಿಸಿದೆ. ಆರೋಪಿಯಿಂದ 20,000 ರೂ. ಮೌಲ್ಯದ ಮೊಬೈಲ್, ಕೃತ್ಯಕ್ಕೆ ಬಳಸಿದ ಆಟೋ (ಅಂದಾಜು 3 ಲಕ್ಷ ರೂ.) ಹಾಗೂ ಒಂದು ಚಾಕು ಸೇರಿದಂತೆ ಒಟ್ಟು 3.20 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ತನಿಖಾ ತಂಡದ ಶೀಘ್ರ ಹಾಗೂ ಪರಿಣಾಮಕಾರಿ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಅಭಿನಂದಿಸಿದ್ದಾರೆ.
