ಶಿವಮೊಗ್ಗ, :ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಲ್ಲಿ ಸಂಭವಿಸಿದ ಪಶುವೈದ್ಯೆ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖಾ ವರದಿ ಅರಣ್ಯ ಸಚಿವರಿಗೆ ಸಲ್ಲಿಸಲಾಗಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಶಿವಮೊಗ್ಗ ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ. ಹನುಮಂತಪ್ಪ ತಿಳಿಸಿದ್ದಾರೆ.
,ಮಾ. 20ರ ರಾತ್ರಿ ಥರ್ಮಲ್ ಕ್ಯಾಮರಾ ಮೂಲಕ ಪ್ರಾಣಿಗಳ ತಾಪಮಾನ ಪರಿಶೀಲನೆ ನಡೆಸುವ ವೇಳೆ ನೀರಾನೆ ದಾಳಿ ಸಂಭವಿಸಿದ್ದು, ಈ ದುರಂತದಲ್ಲಿ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಮೃತಪಟ್ಟಿರುವುದು ದುಃಖಕರ ಘಟನೆ ಎಂದು ಪತ್ರಿಕೆಗೆ ಶನಿವಾರ ಮಾಹಿತಿ ನೀಡಿದರು.
ಘಟನೆ ಕುರಿತು ಸಂಪೂರ್ಣ ಪರಿಶೀಲನೆ ನಡೆಸಿ, ಎಲ್ಲಾ ಅಂಶಗಳನ್ನು ಒಳಗೊಂಡ ಸಮಗ್ರ ವರದಿ ಸಿದ್ಧಪಡಿಸಿ ಅರಣ್ಯ ಸಚಿವರಿಗೆ ಸಲ್ಲಿಸಲಾಗಿದೆ. ವರದಿಯಲ್ಲಿ ಘಟನೆ ಸಂಭವಿಸಿದ ಸಂದರ್ಭ, ಭದ್ರತಾ ವ್ಯವಸ್ಥೆ ಹಾಗೂ ಸಿಬ್ಬಂದಿ ಕಾರ್ಯವಿಧಾನದ ಬಗ್ಗೆ ವಿವರವಾಗಿ ಉಲ್ಲೇಖಿಸಲಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಮೃಗಾಲಯಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಹೆಚ್ಚುವರಿ ಭದ್ರತಾ ಮಾರ್ಗಸೂಚಿಗಳು, ತರಬೇತಿ ಹಾಗೂ ತಂತ್ರಜ್ಞಾನ ಬಳಕೆಯನ್ನು ಬಲಪಡಿಸಲಾಗುವುದು. ಪ್ರಾಣಿಗಳ ನಿರ್ವಹಣೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಸಚಿವರು ವರದಿಯನ್ನು ಪರಿಶೀಲಿಸಿದ ಬಳಿಕ ಅಗತ್ಯ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದರು.
