ಶಿವಮೊಗ್ಗ: ನಗರದ ಪ್ರಮುಖ ಹಸಿರು ತಾಣವಾದ ಈ ಪಾರ್ಕ್ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಲಾಗಿದ್ದು, ಒಂದು ತಿಂಗಳೊಳಗೆ ಸಂಪೂರ್ಣವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ಶಾಸಕ ಚನ್ನಬಸಪ್ಪ ತಿಳಿಸಿದ್ದಾರೆ.
ನಗರಸಭೆ ವತಿಯಿಂದ ನಿರ್ವಹಣೆಗೆ ಹರಾಜು ಪ್ರಕ್ರಿಯೆ ನಡೆಸಿದ ಸಂದರ್ಭದಲ್ಲಿ ಉಂಟಾದ ಗೊಂದಲದ ಹಿನ್ನೆಲೆಯಲ್ಲಿ, ಇನ್ನುಮುಂದೆ ನಗರಸಭೆಯೇ ನೇರವಾಗಿ ನಿರ್ವಹಣೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ಆಟದ ಉಪಕರಣಗಳನ್ನು ದುರಸ್ತಿ ಮಾಡಲಾಗಿದ್ದು, ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸಲಾಗಿದೆ. ಹಸಿರೀಕರಣಕ್ಕಾಗಿ ತುಂತುರು ನೀರಾವರಿ ವ್ಯವಸ್ಥೆ ಜಾರಿಗೊಳಿಸಿ, ಸಸಿಗಳಿಗೆ ನಿಯಮಿತವಾಗಿ ನೀರು ಒದಗಿಸಲಾಗುತ್ತಿದೆ. ಒಳಚರಂಡಿ ನೀರಿನಿಂದ ದುರ್ವಾಸನೆ ಬಾರದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಪಾರ್ಕ್‌ನಲ್ಲಿ ವನ್ಯಜೀವಿ ಮಾಹಿತಿ ಹಾಗೂ ವಿವರಣೆ ಕೇಂದ್ರವನ್ನು ಸ್ಥಾಪಿಸಿ ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗಿದೆ. ಮಕ್ಕಳಲ್ಲಿ ಪರಿಸರ ಮತ್ತು ವನ್ಯಜೀವಿಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಕೇಂದ್ರವನ್ನು ರೂಪಿಸಲಾಗಿದೆ ಎಂದರು.
ಕಾಮಗಾರಿಗಳ ಮೇಲ್ವಿಚಾರಣೆಗೆ ಉಪ ಆಯುಕ್ತರು ಮತ್ತು ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಸಂದರ್ಭದಲ್ಲಿ ಉಪ ಆಯುಕ್ತ ತುಷಾರ್, ಕಾರ್ಯಪಾಲಕ ಅಭಿಯಂತರ ಲಕ್ಷ್ಮೀ ಪ್ರಿಯಾ, ಜ್ಯೋತಿ ಉಪಸ್ಥಿತಿ ಇದ್ದರು
ಪ್ರವೇಶ ಶುಲ್ಕ ವಿವರ
ವಯಸ್ಕರಿಗೆ – 10 ರೂ
ಮಕ್ಕಳಿಗೆ – 5 ರೂ
ಶಾಲಾ ಮಕ್ಕಳಿಗೆ ವಿಶೇಷ ರಿಯಾಯಿತಿ
“ಉಚಿತ ಪ್ರವೇಶ ನೀಡಿದರೆ ಹಾನಿ ಮಾಡುವ ಪ್ರಮಾಣ ಹೆಚ್ಚಾಗುತ್ತದೆ. ಆದ್ದರಿಂದ ಕಡಿಮೆ ಶುಲ್ಕದ ಮೂಲಕ ಸಂರಕ್ಷಣೆಗೆ ಮಹತ್ವ ನೀಡಲಾಗಿದೆ,” ಎಂದು ಶಾಸಕ ಚನ್ನಬಸಪ್ಪ ಹೇಳಿದರು.
ವನ್ಯಜೀವಿ ಕೇಂದ್ರ ಹಾಗೂ ಚಿನ್ನಾರಿ ರೈಲು ಸೇವೆ ಆರಂಭ
ವನ್ಯಜೀವಿ ಮಾಹಿತಿ ಕೇಂದ್ರ ಪ್ರವೇಶ ಶುಲ್ಕ – 20 ರೂ, 10 ರೂ
ಆರಂಭ ದಿನಾಂಕ – ಫೆ. 20
ಚಿನ್ನಾರಿ ರೈಲು ಸೇವೆ ಶುಲ್ಕ ದೊಡ್ಡವರಿಗೆ 20 ರೂ, ಮಕ್ಕಳಿಗೆ 10 ರೂ
ಕುಟುಂಬ ಸಮೇತರಾಗಿ ಬರುವವರಿಗೆ ಮನರಂಜನೆ ಜೊತೆಗೆ ಜ್ಞಾನವರ್ಧಕ ಅನುಭವ ನೀಡುವ ಉದ್ದೇಶದಿಂದ ಈ ವ್ಯವಸ್ಥೆಗಳು ಜಾರಿಗೊಳಿಸಲಾಗಿದೆ.
