
ಸಾಗರದ ಶ್ರೀ ಮಾರಿಕಾಂಬಾ ದೇವಿಯ 9 ದಿನಗಳ ಜಾತ್ರೆ ಜನಸಾಗರದ ನಡುವೆ ಮಂಗಳವಾರದಿಂದ ಆರಂಭಗೊಂಡಿದೆ. ಮೊದಲ ದಿನ ಅಮ್ಮನವರ ದರ್ಶನಕ್ಕೆ ಲಕ್ಷಾಂತರ ಭಕ್ತರು ಬರುವ ಮೂಲಕ ದಾಖಲೆ ನಿರ್ಮಾಣವಾಗಿದೆ. ಬರುವ ಭಕ್ತರಿಗೆ ಸುಲಲಿತವಾಗಿ ದೇವಿ ದರ್ಶನ ಮಾಡಲು ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಂಡಿದ್ದರೇ, ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾನ ಭಕ್ತರು ಸರದಿ ಸಾಲಿನಲ್ಲಿ ದೇವಿ ದರ್ಶನಕ್ಕೆ ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿsಸಲಾಗಿತ್ತು.
ದೇವಿಯ ದರ್ಶನಕ್ಕೆ ಪಾಸ್ ವ್ಯವಸ್ಥೆ ಸಹ ಕಲ್ಪಿಸಲಾಗಿತ್ತು. ಕೆಲವರು ಪಾಸ್ ಮೂಲಕ ಕುಟುಂಬ ಸಮೇತರಾಗಿ ಅಮ್ಮನವರ ದರ್ಶನ ಪಡೆದರು. ಬೇರೆಬೇರೆ ಸಂಘ ಸಂಸ್ಥೆಗಳು ಅಮ್ಮನವರ ದರ್ಶನಕ್ಕೆ ಸರದಿ ಸಾಲಿನಲ್ಲಿ ನಿಂತ ಭಕ್ತರಿಗೆ ನೀರು, ಪಾನಕ ಇನ್ನಿತರೆ ನೀಡಿ ಸೇವೆ ಮಾಡಿದರು.
ಸಾಗರದ ಇತಿಹಾಸ ಪ್ರಸಿದ್ದ ಶ್ರೀ ಮಾರಿಕಾಂಬೆ ದರ್ಶನಕ್ಕೆ ಭಕ್ತರು ನೂಗುನುಗ್ಗಲು ಮಾಡಿದ್ದು ಕಂಡು ಬಂದಿದೆ. ರಾತ್ರಿ ೯ ಗಂಟೆಯಿಂದಲೇ ಮಾರಿಕಾಂಬಾ ದೇವಿ ಪೂಜೆಗೆ ಜನರು ಸರದಿ ಸಾಲಿನಲ್ಲಿ ನಿಂತಿದ್ದರು. ರಾತ್ರಿ ನಿಂತವರಿಗೆ ಬೆಳಿಗ್ಗೆ ೫ ಗಂಟೆಗೆ ಅಮ್ಮನ ದರ್ಶನವಾದರೆ ಬೆಳಿಗ್ಗೆ ೫ರ ನಂತರ ಅಮ್ಮನ ದರ್ಶನಕ್ಕೆ ಬಂದವರಿಗೆ ಮಧ್ಯಾಹ್ನವಾದರೂ ದರ್ಶನ ಭಾಗ್ಯ ಸಿಗಲಿಲ್ಲ. ಅಮ್ಮನವರ ದರ್ಶನಕ್ಕೆ ದೇವಸ್ಥಾನದಿಂದ ಜೋಗ ರಸ್ತೆಯ ಸಣ್ಣಮನೆ ಸೇತುವೆ ದಾಟಿ ಸುಮಾರು ೨ರಿಂದ ೪ ಕಿ.ಮೀ.ವರೆಗೂ ಭಕ್ತರು ಸರದಿ ಸಾಲಿನಲ್ಲಿ ನಿಂತಿದ್ದರು.
ಮಾರಿಕಾಂಬಾ ದೇವಿ ದರ್ಶನ ಜನರಿಗೆ ಸುಲಭವಾಗಿ ಸಿಗಬೇಕು ಎಂದು ಬಿಗಿ ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು. ಇದಕ್ಕಾಗಿ ಸುಮಾರು ೫೦೦ ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿತ್ತು. ಅತಿಹೆಚ್ಚಿನ ಪೊಲೀಸ್ ವ್ಯವಸ್ಥೆಯೆ ಭಕ್ತರ ಅಸಮಾಧಾನಕ್ಕೆ ಕಾರಣವಾಗಿ ದ್ದು, ಯಾರನ್ನೋ ಒಳಗೆ ಬಿಡದೆ ಪೊಲೀಸರು ತೋರಿಸು ತ್ತಿದ್ದ ದರ್ಪಕ್ಕೆ ಜನರು ತೀವೃ ಅಸಮಾಧಾನ ವ್ಯಕ್ತಪಡಿಸಿದರು.
ಆರಂಭದಲ್ಲಿ ಪಾಸ್ ವ್ಯವಸ್ಥೆ ಇಲ್ಲ ಎಂದು ಹೇಳಿದ್ದ ಸಮಿತಿ ಭಕ್ತರ ಒತ್ತಾಯಕ್ಕೆ ಮಣಿದು ಪಾಸ್ ವ್ಯವಸ್ಥೆ ಕಲ್ಪಿಸಿತ್ತು. 1200 ರೂ. ಕೊಟ್ಟು ದೇವಿ ದರ್ಶನಕ್ಕೆ ವಿಶೇಷ ಪಾಸ್ ಪಡೆದವರಿಗೆ ಮಧ್ಯಾಹ್ನ ೨ ಗಂಟೆಯಾದರೂ ಅಮ್ಮನವರ ದರ್ಶನ ಭಾಗ್ಯ ಸಿಗಲಿಲ್ಲ. ಅಷ್ಟೊಂದು ಜನದಟ್ಟಣೆ ಇದ್ದು ಕೊನೆಗೆ ಅಮ್ಮನವರ ದರ್ಶನ ಪಡೆದರು. ದೇವಸ್ಥಾನದಿಂದ ಕೈನಲ್ಲಿ ಪಾಸ್ ಹಿಡಿದು ನಿಂತ ಭಕ್ತರ ಸರದಿ ನೆಹರೂ ಮೈದಾನ ದಾಟಿ ಹೋಗಿತ್ತು. ಅನ್ನದಾಸೋಹ ಮತ್ತು ದೇವಿ ದರ್ಶನಕ್ಕೆ 2000 ರೂ. ಪಾಸ್ ಮಾಡಲಾಗಿತ್ತು. ಈ ಪಾಸ್ ಪಡೆದವರಿಗೆ ಸಹ ಅಮ್ಮನ ದರ್ಶನ ಸುಲಭವಾಗಿ ಸಿಗಲಿಲ್ಲ. ದೇವಸ್ಥಾನದಿಂದ ಸೊರಬ ರಸ್ತೆಯವರೆಗೂ ಬಿಸಿಲಿನಲ್ಲಿ ಪಾಸ್ ಇದ್ದರೂ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಜಾತ್ರೆ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಿದ್ದು, ಇವರು ಕಾರ್ಯನಿಮಿತ್ತ ದೇವಸ್ಥಾನಕ್ಕೆ ಹೋಗಲು ಸಹ ಪೊಲೀಸರು ಅವಕಾಶ ಕಲ್ಪಿಸಲಿಲ್ಲ. ತಮ್ಮ ಬಳಿ ಇರುವ ಪಾಸ್ ತೋರಿಸಿದರೂ ಬಂದೋಬಸ್ತಿನಲ್ಲಿದ್ದ ಪೊಲೀಸರು ಬಿಡಲು ಒಪ್ಪದೆ ಇದ್ದಾಗ ಸಂಚಾಲಕರು ತಮಗೆ ನೀಡಿದ ಬ್ಯಾಡ್ಜ್ ಮತ್ತು ಬ್ಯಾಗ್ ಎಸೆದು ಪೊಲೀಸರಿಗೆ ದಿಕ್ಕಾರ ಕೂಗುವ ಜೊತೆಗೆ ತಾವು ಸಮಿತಿ ವಹಿಸಿದ ಕೆಲಸ ಮಾಡುವುದಿಲ್ಲ ಎಂದು ಹಠ ಹಿಡಿದ ಘಟನೆ ನಡೆಯಿತು. ಜೊತೆಗೆ ಭಕ್ತರ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಸರದಿ ಸಾಲಿನಲ್ಲಿ ನಿಂತ ಭಕ್ತರೂ ದಿಕ್ಕಾರ ಕೂಗಿದರು.
ಹಿಂದಿನ ಎಲ್ಲ ವರ್ಷಗಳಿಗಿಂತ ಈ ವರ್ಷ ಅತಿಹೆಚ್ಚು ಭಕ್ತರು ಅಮ್ಮನವರ ದರ್ಶನಕ್ಕೆ ಬಂದಿರುವುದು, ಹೆಜ್ಜೆಹೆಜ್ಜೆಗೂ ಪೊಲೀಸರು ಬಂದೋಬಸ್ತು ಹೆಸರಿನಲ್ಲಿ ಜನರನ್ನು ತಡೆಯುತ್ತಿದ್ದದ್ದು ಅಸಮಾಧಾನ ತಂದರೂ ಎಲ್ಲೋ ಒಂದು ಕಡೆ ನೂಕುನುಗ್ಗಲು ನಿಯಂತ್ರಣಕ್ಕೂ ಸಹಾಯವಾಯಿತು.
