ಶಿವಮೊಗ್ಗ: ಕೇಂದ್ರ ಹಣಕಾಸು ಸಚಿವರು ಮಂಡಿಸಿದ 9ನೇ ಬಜೆಟ್ ಆತ್ಮನಿರ್ಭರ ಭಾರತ, ವಿಕಸಿತ ಭಾರತ ಹಾಗೂ ಸ್ವಾವಲಂಬಿ ಭಾರತದ ನಿರ್ಮಾಣದ ಸ್ಪಷ್ಟ ದೃಷ್ಟಿಕೋನವನ್ನು ಹೊಂದಿದ್ದು, ದೇಶಾದ್ಯಂತ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಜೆಟ್ ಜನಪ್ರಿಯತೆಯ ಲೆಕ್ಕಾಚಾರಕ್ಕಲ್ಲ, ರಾಷ್ಟ್ರದ ದೀರ್ಘಕಾಲೀನ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ ಎಂದರು. ಜಾಗತಿಕ ಆರ್ಥಿಕ ಅಸ್ಥಿರತೆಗಳ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಧೈರ್ಯಶಾಲಿ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಕೈಗಾರಿಕೆ, ಸೆಮಿಕಂಡಕ್ಟರ್, ಕೃತಕ ಬುದ್ಧಿಮತ್ತೆ ಸೇರಿದಂತೆ ಎಲ್ಲ ವಲಯಗಳಿಗೂ ಸಮಾನ ಆದ್ಯತೆ ನೀಡಲಾಗಿದ್ದು, ಆರ್ಥಿಕ ಶಿಸ್ತನ್ನು ಕಟ್ಟುನಿಟ್ಟಾಗಿ ಕಾಪಾಡಲಾಗಿದೆ ಎಂದು ಹೇಳಿದರು.
ಹಿಂದಿನ ಆರ್ಥಿಕ ವರ್ಷದಲ್ಲಿ ಹಣಕಾಸು ಕೊರತೆಯನ್ನು 4.4 ಶೇಕಡಕ್ಕೆ ಇಳಿಸಲಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಮೂಲಭೂತ ಸೌಕರ್ಯಗಳಿಗೆ ಅಲ್ಪ ಅನುದಾನ ನೀಡಲಾಗುತ್ತಿದ್ದರೆ, ಎನ್ಡಿಎ ಸರ್ಕಾರದ ಕಾಲದಲ್ಲಿ ರಸ್ತೆ, ರೈಲು, ಬಂದರು ಹಾಗೂ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಇತಿಹಾಸದಲ್ಲೇ ಅತ್ಯಧಿಕ ವೆಚ್ಚ ಮಾಡಲಾಗಿದೆ. ರೈತರ ಆದಾಯ ದ್ವಿಗುಣಗೊಳಿಸುವ ದಿಕ್ಕಿನಲ್ಲಿ ದಿಟ್ಟ ಕ್ರಮ ಕೈಗೊಳ್ಳಲಾಗಿದೆ. ಆಹಾರ ಮತ್ತು ವಾಣಿಜ್ಯ ಮೀನುಗಾರಿಕೆಗೆ ಶೇ.6ರಷ್ಟು ಹೆಚ್ಚುವರಿ ಅನುದಾನ ಒದಗಿಸಲಾಗಿದೆ ಎಂದು ವಿವರಿಸಿದರು.
ಯುವಕರು, ಬಡವರು, ರೈತರು ಮತ್ತು ಮಹಿಳೆಯರು ಎಂಬ ನಾಲ್ಕು ಪ್ರಮುಖ ವರ್ಗಗಳನ್ನು ಕೇಂದ್ರಬಿಂದುವಾಗಿ ಬಜೆಟ್ ರೂಪಿಸಲಾಗಿದೆ. ಮಹಿಳಾ ಉದ್ಯಮಶೀಲತೆಗೆ ‘ಶೀ ಮಾರ್ಟ್’ ಮೂಲಕ ಉತ್ತೇಜನ ನೀಡಲಾಗಿದ್ದು, ಪ್ರತೀ ಜಿಲ್ಲೆಯಲ್ಲಿ ಮಹಿಳಾ ಹಾಸ್ಟೆಲ್ ಸ್ಥಾಪನೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡಲಾಗಿದ್ದು, ಚೆನ್ನೈ–ಬೆಂಗಳೂರು ಹಾಗೂ ಹೈದ್ರಾಬಾದ್–ಬೆಂಗಳೂರು ಹೈಸ್ಪೀಡ್ ರೈಲು ಯೋಜನೆಗಳಿಗೂ ಬಜೆಟ್ನಲ್ಲಿ ಸ್ಪಷ್ಟ ಬೆಂಬಲ ನೀಡಲಾಗಿದೆ. ತೆಂಗು, ಮೀನುಗಾರಿಕೆ ಮತ್ತು ಶ್ರೀಗಂಧ ಬೆಳೆಗಾರರಿಗೂ ವಿಶೇಷ ನೆರವು ಕಲ್ಪಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ವಿಜಯೇಂದ್ರ, ಕಳೆದ ಎರಡೂವರೆ ವರ್ಷಗಳಿಂದ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ನಿರಂತರವಾಗಿ ಅಪಪ್ರಚಾರ ನಡೆಸುತ್ತಲೇ ಬಂದಿದೆ. ರಾಜ್ಯದ ವೈಫಲ್ಯಗಳನ್ನು ಮುಚ್ಚಿಹಾಕಲು ಕೇಂದ್ರದ ವಿರುದ್ಧ ಬೊಟ್ಟು ತೋರಿಸುವುದೇ ಕಾಂಗ್ರೆಸ್ ಸರ್ಕಾರದ ನಿತ್ಯದ ಕೆಲಸವಾಗಿದೆ ಎಂದು ಆರೋಪಿಸಿದರು.
16ನೇ ಹಣಕಾಸು ಆಯೋಗದ ಮೂಲಕ ರಾಜ್ಯಗಳಿಗೆ ಜಿಡಿಪಿಗೆ ಅನುಗುಣವಾಗಿ ಹೆಚ್ಚಿನ ಅನುದಾನ ನೀಡಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಕರ್ನಾಟಕದ ಪಾಲು ಶೇ.3.65ರಿಂದ 4.13ಕ್ಕೆ ಹೆಚ್ಚಾಗಿದೆ. ಇದರಿಂದ ಪ್ರತಿವರ್ಷ 7,387 ಕೋಟಿ ರೂ. ಹೆಚ್ಚುವರಿ ಅನುದಾನ ಸಿಗಲಿದ್ದು, ಮುಂದಿನ ವರ್ಷಕ್ಕೆ ಒಟ್ಟು 63,050 ಕೋಟಿ ರೂ. ರಾಜ್ಯಕ್ಕೆ ಲಭ್ಯವಾಗಲಿದೆ. ಆದರೂ ಸಿದ್ದರಾಮಯ್ಯ ಅವರು ವಾಸ್ತವವನ್ನು ಮರೆಮಾಚಿ ಜನರನ್ನು ತಪ್ಪು ದಾರಿಯಲ್ಲಿ ನಡೆಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ವಿಭಜಕ ಮನಸ್ಥಿತಿಯಿಂದ ಹೊರಬರಬೇಕು. ವೀರಶೈವ–ಲಿಂಗಾಯಿತರನ್ನು ವಿಭಜಿಸಲು ಮನಸ್ಥಿತಿಯೇ ಈಗ ದೇಶದ ಒಕ್ಕೂಟ ವ್ಯವಸ್ಥೆಯ ಮೇಲೂ ದಾಳಿ ಮಾಡುವ ಮಟ್ಟಕ್ಕೆ ತಲುಪಿದೆ. ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಮಾತುಗಳು ದೇಶದ ಏಕತೆಗೆ ಧಕ್ಕೆಯಾಗುತ್ತವೆ. ಇದು ರಾಜ್ಯಕ್ಕೂ ರಾಷ್ಟ್ರಕ್ಕೂ ಅಪಾಯಕಾರಿ ರಾಜಕಾರಣವಾಗಿದೆ ಎಂದು ವಿಜಯೇಂದ್ರ ಕಟುವಾಗಿ ಟೀಕಿಸಿದರು.
‘ನಮ್ಮ ತೆರಿಗೆ ನಮ್ಮ ಹಕ್ಕು’ ಎಂಬ ಘೋಷಣೆಯಡಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಕೇವಲ ನಾಟಕವಾಗಿದ್ದು, ಗ್ಯಾರಂಟಿ ಯೋಜನೆಗಳ ಹೊರೆ ತಗ್ಗಿಸಲು ಅಬಕಾರಿ ತೆರಿಗೆ ಗುರಿಯನ್ನು 40 ಸಾವಿರ ಕೋಟಿ ರೂ.ಗೆ ಏರಿಸಲಾಗಿದೆ. ಮುಂದಿನ ದಿನಗಳಲ್ಲಿ ಅಬಕಾರಿ ಗುತ್ತಿಗೆದಾರರು ಇದೇ ಬೇಡಿಕೆಯನ್ನು ಮುಂದಿಟ್ಟು ವಿಧಾನಸೌಧ ಮುತ್ತಿಗೆ ಹಾಕಿದರೆ ಸರ್ಕಾರ ಏನು ಉತ್ತರ ನೀಡಲಿದೆ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರದ ಅವ್ಯವಸ್ಥೆಯಿಂದ ಅಧಿಕಾರಿಗಳು ರಾತ್ರಿ 3 ಗಂಟೆಯವರೆಗೂ ಕೆಲಸ ಮಾಡುವಂತಾಗಿದೆ. ಇದು ಜನಪರ ಆಡಳಿತವಲ್ಲ, ಅಧಿಕಾರಿಗಳ ಮೇಲೆ ಒತ್ತಡ ಹೇರಿದ ಅರಾಜಕ ಆಡಳಿತವಾಗಿದೆ ಎಂದು ಹೇಳಿದರು. ಈಶಾನ್ಯ ರಾಜ್ಯಗಳಿಗೆ 6 ಸಾವಿರ ಕೋಟಿ ರೂ. ಅನುದಾನ ನೀಡಿರುವುದು ಕೇಂದ್ರ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಇಂತಹ ದೃಢ ನಿರ್ಧಾರಗಳೇ ಇರಲಿಲ್ಲ ಎಂದು ಹೇಳಿದರು.
ಆದಾಯ ತೆರಿಗೆ ಮಿತಿಯನ್ನು 12 ಲಕ್ಷ ರೂ.ವರೆಗೆ ವಿನಾಯಿತಿ ನೀಡುವ ಮೂಲಕ ಮಧ್ಯಮ ವರ್ಗಕ್ಕೆ ಮಹತ್ವದ ರಿಲೀಫ್ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ದ್ವೇಷ ಭಾಷಣ ಕಾಯ್ದೆಯನ್ನು ಆತುರಾತುರವಾಗಿ ಜಾರಿಗೊಳಿಸಿದ್ದು, ಇದು ವಿಪಕ್ಷಗಳನ್ನು ಧಮನ ಮಾಡುವ ರಾಜಕೀಯ ಅಸ್ತ್ರವಾಗಿದೆ ಎಂದು ಆರೋಪಿಸಿದರು. ಬಾಂಗ್ಲಾದೇಶೀಯರ ಅಕ್ರಮ ವಾಸ ಕುರಿತು ಮಾತನಾಡಿದ ಪುನೀತ್ ಕೆರೆಹಳ್ಳಿಯನ್ನು ಬಂಧಿಸಿರುವುದು ಮಾತಿನ ಸ್ವಾತಂತ್ರ್ಯದ ಮೇಲಿನ ನೇರ ದಾಳಿ ಎಂದು ಕಿಡಿಕಾರಿದರು. ಅಕ್ರಮ ಗೋಸಾಗಾಣಿಕೆಗೆ ಸಂಬಂಧಿಸಿದಂತೆ ಸ್ಟೇಷನ್ ಬೇಲ್ ನೀಡಲು ಸರ್ಕಾರ ಯತ್ನಿಸಿದ್ದನ್ನು ರಾಜ್ಯಪಾಲರು ತಡೆದಿರುವುದನ್ನು ಸ್ವಾಗತಿಸುವುದಾಗಿ ಹೇಳಿದರು.
ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಜಗದೀಶ್ ಎನ್ ಕೆ, ಒಬಿಸಿ ರಾಜ್ಯಾಧ್ಯಕ್ಷರಾದ ರಘು ಕೌಟಿಲ್ಯಾ, ಮಾಜಿ ಶಾಸಕರುಗಳಾದ ಎಸ್.ರುದ್ರೇಗೌಡ್ರು, ಅಶೋಕ ನಾಯ್ಕ್, ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ಮಾಲತೇಶ್, ಒಬಿಸಿ ಜಿಲ್ಲಾಧ್ಯಕ್ಷರಾದ ಸುಧಾಕರ್, ಮಾಧ್ಯಮ ಪ್ರಮುಖ್ ಎಸ್.ಚಂದ್ರಶೇಖರ್, ಸಹ ಪ್ರಮುಖ್ ಮಂಜುನಾಥ್ ಎನ್ ಉಪಸ್ಥಿತರಿದ್ದರು
