ಭದ್ರಾವತಿ:ನಗರದ ಖ್ಯಾತ ರಂಗಭೂಮಿ ಕಲಾವಿದೆ, ಸಮಾಜ ಸೇವಕಿ, ಹಾಗು ಏಕ ವ್ಯಕ್ತಿ ಪ್ರದರ್ಶನ ಕಲಾವಿದೆ, ನಂದಿನಿ ಮಲ್ಲಿಕಾರ್ಜುನ್ ರವರಿಗೆ ಬೆಂಗಳೂರು ಕೆಂಗೇರಿ ಉಪ ನಗರದ ವಳಗೆರೆ ಹಳ್ಳಿಯಲ್ಲಿರುವ ಅಖಿಲ ಕರ್ನಾಟಕ ಅಂಗವಿಕಲರ ಸೇವಾ ಟ್ರಸ್ಟ್ ನಾಗರಭಾವಿ ಮಲ್ಲತ್ತಹಳ್ಳಿಯ ಕಲಾ ಗ್ರಾಮದಲ್ಲಿ ಏರ್ಪಡಿಸಿದ್ದ 2026 ನೇ ಹೊಸ ವರ್ಷದ ಸಮಾರಂಭದ ಅಂಗವಾಗಿ ಹೊಸ ವರ್ಷದ ಪ್ರಶಸ್ತಿಯ ಪುರಸ್ಕಾರ ನೀಡಿ ಗೌರವಿಸಿದ್ದಾರೆ.

ಸಾಮಾನ್ಯ ಗೃಹಿಣಿಯಾಗಿ ತಮ್ಮ ಕಟುಂಬದ ನಿರ್ವಹಣೆ ಮಾಡಿಕೊಂಡಿದ್ದ ಇವರು. ಗೃಹಿಣಿಯಾದವಳು ಕೇವಲ ಮನೆಗೆ ಮಾತ್ರ ಸೀಮಿತ ಎಂಬ ಮಾತನ್ನು ಸುಳ್ಳಾಗಿಸಿ, ತಮ್ಮ ಬಿಡುವಿನ ವೇಳೆಯಲ್ಲಿ ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಸಮಾಜ ಸೇವೆ ಮಾಡುತ್ತಿದ್ದರು.
ಇದರ ಜೊತೆಗೆ ಹವ್ಯಾಸಕ್ಕಾಗಿ ರಂಗಭೂಮಿಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತ ಸಂಧರ್ಭದಲ್ಲಿ ನಾಟಕಗಳಲ್ಲಿ ಅಭಿನಯಿಸುವ ಅವಕಾಶ ದೊರೆಯಿತು.
ಇದರ ಪರಿಣಾಮ ನಾಟಕಗಳಲ್ಲಿನ ವಿಭಿನ್ನ ರೀತಿಯ ಪಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸಿದರು. ಇದರ ಫಲವಾಗಿ ಹಲವಾರು ನಾಟಕಗಳಲ್ಲಿ ಅಭಿನಯಿಸುವ ಅವಕಾಶ ದೊರೆಯಿತು. ಇದಲ್ಲದೆ ಏಕ ವ್ಯಕ್ತಿ ಕಲಾವಿದೆ ಯಾಗಿಯೂ ಪ್ರಸಿಧ್ಧಿ ಪಡೆದರು. ಇದರ ಪರಿಣಾಮವಾಗಿ ನಂತರದ ದಿನಗಳಲ್ಲಿ ರಂಗಭೂಮಿ ಕ್ಷೇತ್ರದಲ್ಲಿ ಉತ್ತಮ ಕಲಾವಿದೆಯಾಗಿ ರೂಪಗೊಂಡರು. ಈ ಕ್ಷೇತ್ರದಲ್ಲಿ ಸುಮಾರು 25 ವರ್ಷಗಳಿಗೂ ಹೆಚ್ಚಿನ ಕಾಲದಿಂದ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.
ಉತ್ತಮ ಧ್ವನಿಯ ಹಿನ್ನಲೆ ಮಾತುಗಾರಿಕೆಯ ಚತುರತೆಯ ಫಲವಾಗಿ ಆಕಾಶವಾಣಿಯ ಬಿ ಗ್ರೇಡ್ ಕಲಾವಿದೆ ಆಗಿಯೂ ಗುರುತಿಸಿಕೊಂಡಿದ್ದಾರೆ. ಇದರ ಪರಿಣಾಮ ಆಕಾಶವಾಣಿ ಕಲಾವಿದೆಯಾಗಿಯೂ ರೂಪಗೊಂಡರು. ಇವರು ದ್ವನಿ ನೀಡಿದ ಸುಮಾರು 10 ಕ್ಕೂ ಹೆಚ್ಚು ನಾಟಕಗಳು ಬಾನುಲಿಯಲ್ಲಿ ರಾಜ್ಯದಾದ್ಯಂತ ಬಿತ್ತರಗೊಂಡು ವಿಶೇಷ ಪ್ರಸಾರ ಪಡೆದ ಮನ್ನಣೆಗೆ ಪಾತ್ರರಾದರು. ಇದಲ್ಲದೆ ಐದಕ್ಕೂ ಹೆಚ್ಚು ಸಿಡಿಗಳಿಗೆ ದ್ವನಿ ನೀಡುವ ಮೂಲಕ ಹಿನ್ನಲೆ ಸಂಭಾಷಣೆ ಮಾತುಗಾರಿಕಗೆಗೆ ಪ್ರಸಿಧ್ದರಾದರು.
ಇವರ ರಂಗಭೂಮಿ ನಟನೆಗೆ ಸಾಕ್ಷಿಯಾಗಿ ತವರು ಮನೆ, ಸನ್ಮಾನ ಸುಖ, ಸುವ್ವಿ ಬಾ ಸಂಗಯ್ಯ, ಕಿಸ್ಸಾ ಗೌತಮಿ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲ್ಲೂಕಿನ ಈಸೂರು ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಹೆಸರುವಾಸಿಯಾದ ಬಲಿದಾನದ ನಡೆದ ಘಟನೆ ಆಧಾರಿತ ನಾಟಕ ಈಸೂರಿನ ಈ ಶೂರರು, ಉರ‍್ಮಿಳಾ, ಬಸವಣ್ಣನೇ ದಿಕ್ಕು, ಏಕ ವ್ಯಕ್ತಿ ಪ್ರಧಾನ ಆಧಾರದ ನಾಟಕಗಳಾದ ನಿರಾಕರಣೆ ಮೃಶಾಲಿ, ಸತಿ ಯಂತಹ ನಾಟಕಗಲ್ಲಿ ಮನೋಜ್ಞವಾಗಿ ಅಭಿನಯಿಸುವ ಮೂಲಕ ಎಂತಹ ಪಾತ್ರಕ್ಕಾದರೂ ಸೈ ಎನಿಸಿಕೊಂಡರು.
ಇದರ ಜೊತೆಗೆ ಏಕ ವ್ಯಕ್ತಿ ಅಭಿನಯದ ಪಾತ್ರಗಳಲ್ಲಿ ರಾಜ್ಯದಲ್ಲಿ ಎಂಟನೆ ರಂಗಭೂಮಿ ಕಲಾವಿದೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ದೂರದರ್ಶನ ಚಂದನದಲ್ಲಿ ಪ್ರದರ್ಶನ ನೀಡಿರುತ್ತಾರೆ. ಅಭಿನಯಿಸುವುದರ ಜೊತೆಗೆ ಅನೇಕ ನಾಟಕಗಳನ್ನು ರಚಿಸಿ ನಿರ್ದಶನ ಮಾಡಿದ ಖ್ಯಾತಿ ಇವರದಾಗಿದೆ. ಇದು ಉಕ್ಕಿನ ನಗರಿ ಹಾಗು ರಂಗಭೂಮಿ ಕಲಾವಿದರ ತವರೂರಾದ ಒಂದು ಕಾಲದಲ್ಲಿ ೫೦ ಕ್ಕೂ ಹೆಚ್ಚು ನಾಟಕ ತಂಡಗಳಿದ್ದ ಭದ್ರಾವತಿ ನಗರಕ್ಕೆ ಸಂದ ಗೌರವವಾಗಿದೆ.
ಇವೆಲ್ಲದರ ಮಧ್ಯೆ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಅಧ್ಯಕ್ಷೆಯಾಗಿ, ಮಾತೃ ಮಂಡಳಿ ಅಧ್ಯಕ್ಷೆಯಾಗಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ನ ಪ್ರಧಾನ ಕಾರ್ಯದರ್ಶಿಯಾಗಿ, ಶಾಂತಲಾ ಕಲಾ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾಗಿ ಭದ್ರಾ ಸುಗಮ ಸಂಗೀತ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾಗಿ, ಶಾಶ್ವತ ಮಹಿಳಾ ಸಮಾಜದ ಖಜಾಂಚಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
