ನವದೆಹಲಿ, :ಪರಿಸರ ಸೂಕ್ಷ್ಮ ಹಾಗೂ ಅಪಘಾತಗಳಿಗೆ ಹೆಸರಾದ ಆಗುಂಬೆ ಘಾಟ್ ರಸ್ತೆಯ ಮೇಲ್ದರ್ಜೆಗೇರಿಸುವ ದಿಕ್ಕಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ-169ಎ ವ್ಯಾಪ್ತಿಯ ಆಗುಂಬೆ ಘಾಟ್ ರಸ್ತೆ (ಕಿ.ಮೀ. 30.75 ರಿಂದ 51.60) ಅಭಿವೃದ್ಧಿಗಾಗಿ ಕಾರ್ಯಸಾಧ್ಯತಾ ಅಧ್ಯಯನ, ಸಮೀಕ್ಷೆ, ಭೂ ಯೋಜನೆ ಹಾಗೂ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಟೆಂಡರ್ ಆಹ್ವಾನಿಸಿದೆ.
ಈ ಯೋಜನೆಯಡಿ ರಸ್ತೆನ್ನು ಎರಡು ಲೇನ್ಗಳಿಗೆ ವಿಸ್ತರಿಸುವುದರ ಜೊತೆಗೆ ಎರಡೂ ಬದಿ ಪಾದಚಾರಿ ಮಾರ್ಗ ಕಲ್ಪಿಸುವ ಉದ್ದೇಶವಿದೆ. ಗಮನಾರ್ಹವಾಗಿ, ಡಿಪಿಆರ್ ವ್ಯಾಪ್ತಿಯಲ್ಲಿ ಸುರಂಗ ಮಾರ್ಗ ನಿರ್ಮಾಣದ ಕಾರ್ಯಸಾಧ್ಯತೆಯನ್ನು ಪರಿಶೀಲಿಸುವ ಅಂಶವೂ ಸೇರಿದ್ದು, ಸುರಂಗ ವಿನ್ಯಾಸ ತಜ್ಞರು ಹಾಗೂ ಹಿರಿಯ ಭೂ-ಭೌತಶಾಸ್ತ್ರಜ್ಞರ ಸೇವೆ ಪಡೆಯಲು ಹಾಗೂ ಭೂ-ತಾಂತ್ರಿಕ ತನಿಖೆ ನಡೆಸಲು ಪ್ರತ್ಯೇಕ ಬಜೆಟ್ ವ್ಯವಸ್ಥೆ ಮಾಡಲಾಗಿದೆ. ಈ ಡಿಪಿಆರ್ ಅನ್ನು ಆರು ತಿಂಗಳೊಳಗೆ ಸಿದ್ಧಪಡಿಸುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ 2.33 ಕೋಟಿ ರೂ. ಮೀಸಲಿಡಲಾಗಿದೆ.
ಸಂಸದ ಬಿ.ವೈ. ರಾಘವೇಂದ್ರ ಮಾಧ್ಯಮದೊಂದಿಗೆ ಮಾತನಾಡುತ್ತಾ ದಶಕಗಳಿಂದ ಬಾಕಿ ಉಳಿದಿದ್ದ ಆಗುಂಬೆ ಘಾಟ್ ರಸ್ತೆ ಮೇಲ್ದರ್ಜೆಗೇರಿಸುವ ಜನರ ಬೇಡಿಕೆಗೆ ಇದು ಸ್ಪಷ್ಟ ಮತ್ತು ನಿರ್ಣಾಯಕ ಮೊದಲ ಆಡಳಿತಾತ್ಮಕ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ. ಪರಿಸರ ಸಂವೇದನಾಶೀಲ ಪಶ್ಚಿಮ ಘಟ್ಟ ಪ್ರದೇಶದ ಪ್ರಕೃತಿ ಸಮತೋಲನಕ್ಕೆ ಗೌರವ ನೀಡುತ್ತಲೇ ವೈಜ್ಞಾನಿಕವಾಗಿ ರಸ್ತೆ ಅಭಿವೃದ್ಧಿ ಕೈಗೊಳ್ಳುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ ಎಂದು ಹೇಳಿದ್ದಾರೆ.
“ಡಿಪಿಆರ್ ಪ್ರಕ್ರಿಯೆ ಆರಂಭವಾಗಿರುವುದೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಗಂಭೀರವಾಗಿ ಪರಿಗಣಿಸುತ್ತಿರುವುದಕ್ಕೆ ಸಾಕ್ಷಿ. ಈ ರಸ್ತೆ ಅಭಿವೃದ್ಧಿಯಿಂದ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ ಸಂಪರ್ಕ ಸುಧಾರಣೆಯಾಗಲಿದ್ದು, ಸ್ಥಳೀಯ ಜನತೆ, ರೈತರು, ಪ್ರವಾಸೋದ್ಯಮ ಮತ್ತು ತುರ್ತು ಸೇವೆಗಳಿಗೆ ಮಹತ್ವದ ಲಾಭವಾಗಲಿದೆ” ಎಂದು ತಿಳಿಸಿದರು.
ಈ ನಿರ್ಧಾರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಅವರು ಕೃತಜ್ಞತೆ ಸಲ್ಲಿಸಿದ್ದು, ಮುಂದಿನ ಹಂತಗಳಲ್ಲಿ ಯೋಜನೆ ಸುಗಮವಾಗಿ ಸಾಗಲು ಕೇಂದ್ರದೊಂದಿಗೆ ನಿರಂತರ ಸಂಯೋಜನೆ ನಡೆಸಲಾಗುವುದು ಎಂದಿದ್ದಾರೆ. ಭೂಸ್ವಾಧೀನ ಮತ್ತು ಕಾನೂನು ಪ್ರಕ್ರಿಯೆಗಳಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
