ಶಿವಮೊಗ್ಗ: ಸೆ.೧೩ ರಂದು ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿ ಬಾಕಿ ಇದ್ದ ವಿವಿಧ ಸ್ವರೂಪದ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರದಂತೆ ಒಟ್ಟು ೧,೪೬,೪೬೪ ಪ್ರಕರಣಗಳನ್ನು ರಾಜಿ ಸಂಧಾನ ಮಾಡಿಸುವ ಮೂಲಕ ಇತ್ಯರ್ಥ ಪಡಿಸಲಾಯಿತು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ಎಸ್. ಸಂತೋಷ್ ತಿಳಿಸಿದ್ದಾರೆ.
ಪ್ರಕರಣಗಳನ್ನು ರಾಜಿ ಮಾಡಿಸಲು ಶಿವಮೊಗ್ಗ ಜಿಲ್ಲೆಯಲ್ಲಿನ ಎಲ್ಲಾ ತಾಲ್ಲೂಕುಗಳ ನ್ಯಾಯಾಲಗಳನ್ನು ಒಳಗೊಂಡಂತೆ ಒಟ್ಟು ೩೮ ಲೋಕ್ ಅದಾಲತ್ ಪೀಠಗಳನ್ನು ರಚನೆ ಮಾಡಲಾಗಿದ್ದು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ರವರ ಮಾರ್ಗದರ್ಶನದಲ್ಲಿ ವಿವಿಧ ಪ್ರಕರಣಗಳನ್ನು ರಾಜಿ ಸಂಧಾನ ಮಾಡಿಸಲಾಯಿತು ಎಂದು ತಿಳಿಸಿದ್ದಾರೆ.
ವಿವಿಧ ಸ್ವರೂಪದ ೧೪,೫೫೦ ಹಾಗೂ ವ್ಯಾಜ್ಯ ಪೂರ್ವ ೧,೧೩,೯೧೪ ಪ್ರಕರಣಗಳನ್ನು ರಾಜಿ ಸಂಧಾನ ಮಾಡಲಾಗಿದ್ದು, ಇವುಗಳ ಪೈಕಿ ೧೬ ದಂಪತಿಗಳು ತಮ್ಮ ಪ್ರಕರಣವನ್ನು ಹಿಂಪಡೆದು ಒಟ್ಟಾಗಿ ಜೀವನ ನಡೆಸುವಂತೆ ರಾಜಿ ಮಾಡಿಕೊಂಡಿದ್ದು ವಿಶೇಷವಾಗಿದೆ. ಹತ್ತು ವರ್ಷಕ್ಕಿಂತ ಹಳೆಯದಾದ ೬, ಐದು ವರ್ಷಕ್ಕಿಂತ ಹಳೆಯದಾದ ೪೯ ಹಾಗೂ ಹಿರಿಯ ನಾಗರೀಕರಿಗೆ ಸಂಬಂಧಿಸಿದ ಒಟ್ಟು ೩೧ ಪ್ರಕರಣಗಳು ರಾಜಿ ಸಂಧಾನದಿಂದ ಇತ್ಯರ್ಥಗೊಂಡಿವೆ ಎಂದು ಮಾಹಿತಿ ನೀಡಿದ್ದಾರೆ.ಸಾಥಿ ಅಭಿಯಾನದಡಿ ಜನನ ಪ್ರಮಾಣಪತ್ರವನ್ನು ಪಡೆಯುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ಸಂಯೋಜನೆಯಲ್ಲಿ ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ ಹಾಗೂ ಎಲ್ಲಾ ತಾಲ್ಲೂಕು ಕಾನೂನು ಸೇವಾ ಸಮಿತಿಗಳ ಮೂಲಕ ನ್ಯಾಯಾಲಯಗಳಲ್ಲಿ ಒಟ್ಟು ೩೮೫ ಅರ್ಜಿಗಳನ್ನು ದಾಖಲಿಸಿ ರಾಷ್ಟ್ರೀಯ ಲೋಕಾ ಅದಾಲತ್‌ನ ನ್ಯಾಯಾಲಯಗಳಿಂದ ಜನನ ನೋಂದಣಿಗೆ ಸಂಬಂಧಿಸಿದಂತೆ ಸೂಕ್ತ ಆದೇಶವನ್ನು ಹೊರಡಿಸಲಾಗಿದೆ.ಜನನ ಪ್ರಮಾಣ ಪತ್ರ ಪಡೆಯಲು ನ್ಯಾಯಾಲಯಕ್ಕೆ ಪ್ರಕರಣ ದಾಖಲಿಸಲು ಅನುವಾಗುವಂತೆ ಶಿವಮೊಗ್ಗ ಮಹಾನಗರ ಪಾಲಿಕೆಯ ದಾಖಲೆಗಳನ್ನು ಜನನ-ಮರಣ ನೋಂದಣಾಧಿಕಾರಿಗಳು ಪರಿಶೀಲಿಸಿದ ಸಂದರ್ಭದಲ್ಲಿ ಒಟ್ಟು ೮೧ ಮಕ್ಕಳ ಜನನ ಪ್ರಮಾಣ ಪತ್ರ ಲಭ್ಯವಿರುವ ಬಗ್ಗೆ ಕಂಡು ಬಂದಿದ್ದು, ಅವುಗಳನ್ನು ಪೋಷಕರಿಗೆ ನೇರವಾಗಿ ನೀಡಲು ಕ್ರಮವಹಿಸಲಾಗಿದ್ದು, ಒಟ್ಟಾರೆ ೪೬೬ ಮಕ್ಕಳ ಜನನ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಈ ಲೋಕಾ ಅದಾಲತ್ ಸಂದರ್ಭದಲ್ಲಿ ಕಾನೂನು ಸೇವಾ ಸಂಸ್ಥೆಗಳ ಮೂಲಕ ಕ್ರಮ ವಹಿಸಲಾಗಿದೆ.
ಲೋಕ್ ಅದಾಲತ್‌ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಧೀಶರು, ನ್ಯಾಯಾಲಯದ ಸಿಬ್ಬಂದಿ, ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ಸರ್ಕಾರಿ ಅಭಿಯೋಜಕರು, ಶಿವಮೊಗ್ಗ ಜಿಲ್ಲೆಯ ಹಾಗೂ ಎಲ್ಲಾ ತಾಲ್ಲೂಕಿನ ವಕೀಲದ ಸಂಘದ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರು, ವಿವಿಧ ವಿಮೆ ಕಂಪನಿಯ ಹಾಗೂ ಬ್ಯಾಂಕ್ ಅಧಿಕಾರಿಗಳು, ಅವುಗಳ ಪ್ಯಾನಲ್ ವಕೀಲರುಗಳು ಹಾಗೂ ಕಕ್ಷಿದಾರರು ಸಕ್ರೀಯವಾಗಿ ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.