ತೀರ್ಥಹಳ್ಳಿ : ವಿದ್ಯಾರ್ಥಿಗಳು ಕೇವಲ ಪಾಠ ಪ್ರವಚನಗಳಿಗೆ ಮಾತ್ರ ಸೀಮಿತರಾಗದೆ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮ ವ್ಯಕ್ತಿತ್ವವನ್ನು ಅರಳಿಸಿಕೊಳ್ಳಬೇಕು. ದೇಶದ ಪ್ರತಿ ನಾಗರಿಕನಿಗೂ ಒಂದು ಸಾಮಾಜಿಕ ಜವಾಬ್ದಾರಿ ಇದೆ ವಿದ್ಯಾರ್ಥಿಗಳು ಅದನ್ನು ಅರಿತು ರಾಷ್ಟ್ರ ಪ್ರಜ್ಞೆಯನ್ನು ಬೆಳೆಸಿಕೊಂಡು ದೇಶ ಕಟ್ಟುವ ಕಾಯಕದಲ್ಲಿ ತಮ್ಮನ್ನ ತೊಡಗಿಸಿಕೊಳ್ಳಬೇಕು ಎಂದು ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಆರಗ ಜ್ಞಾನೇಂದ್ರ ತಿಳಿಸಿದರು.
ಅವರು ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ವೇದಿಕೆ ಹಾಗೂ ಇತರೆ ವೇದಿಕೆಗಳನ್ನು ಒಳಗೊಂಡಂತೆ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದ ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡುತ್ತಿದ್ದರು.
ಪಶು ವೈದ್ಯರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಡಾ. ಮುರುಳಿಧರ್ ಕಿರಣ ಕೆರೆ ಮಾತನಾಡಿ ಯುವಶಕ್ತಿ ದೇಶದ ಬಹುದೊಡ್ಡ ಸಂಪತ್ತು ನಿಮ್ಮೆಲ್ಲರಲ್ಲೂ ಅದಮ್ಯವಾದ ಚೈತನ್ಯ ಶಕ್ತಿ ಅಡಗಿದೆ ನೀವು ಇದನ್ನ ಅರಿತು ನಿಮ್ಮ ಕಾಲೇಜು ದಿನಗಳಲ್ಲಿ ಪಠ್ಯದ ಜೊತೆಗೆ ಪಠ್ಯಪೂರಕವಾದ ಎನ್‌ಎಸ್‌ಎಸ್, ರೋವರ್ಸ್ ರೇಂಜರ್ಸ್, ರೆಡ್ ಕ್ರಾಸ್, ರೆಡ್ ರಿಬ್ಬನ್ ಮೊದಲಾದ ವೇದಿಕೆಗಳಲ್ಲಿ ತಮ್ಮನ್ನ ತೊಡಗಿಸಿಕೊಂಡು ನಿಮ್ಮೊಳಗಿನ ಚೈತನ್ಯವನ್ನು ಹೊರಗಡೆಯುವುದರ ಮೂಲಕ ನಿಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸಿಕೊಳ್ಳಬೇಕು, ಅಲ್ಲದೇ ಯುವಶಕ್ತಿ ಯಾವುದೇ ಮಾದಕ ವ್ಯಸನಗಳಿಗೆ ಬಲಿಯಾಗದೆ ಸಮಾಜಮುಖಿಯಾಗಿ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಸೌಮ್ಯ ಕೆ.ಸಿ ರವರು ವಹಿಸಿಕೊಂಡಿದ್ದು ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪಠ್ಯ ಹಾಗೂ ಸಹ ಪಠ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಉತ್ತಮ ಪ್ರಜೆಗಳಾಗಿ ಬೆಳೆಯಲು ಇರುವ ಅವಕಾಶಗಳ ಬಗೆಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಸಾಂಸ್ಕೃತಿಕ ವೇದಿಕೆಯ ಸಂಚಾಲಕರಾದ ಮಾರುತಿಯವರು ಸರ್ವರನ್ನು ಸ್ವಾಗತಿಸಿದರು. ಐಕ್ಯೂಎಸಿ ಸಂಚಾಲಕರಾದ ಡಾ.ಗಣಪತಿ.ಹೆಚ್.ಎ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ನರಸಿಂಹ ಎಸ್.ಎ ರವರು ಸರ್ವರನ್ನು ವಂದಿಸಿದರು. ಸಂದರ್ಭದಲ್ಲಿ ಎಲ್ಲಾ ವಿಭಾಗದ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
