ಶಿವಮೊಗ್ಗವನ್ನು ನಶೆ ಮುಕ್ತ ಜಿಲ್ಲೆಯನ್ನಾಗಿಸುವುದು ತಮ್ಮ ಮೊದಲ ಆದ್ಯತೆಯೆಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ನಿಖಿಲ್ ಹೇಳಿದರು.

ಡಿಎಆರ್ ಸಭಾಂಗಣದಲ್ಲಿ ನಡೆದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡ್ರಗ್ಸ್ ವಿರುದ್ಧ ಕಠಿಣ ಹೋರಾಟ ನಡೆಸಲಾಗುವುದಾಗಿ ಸ್ಪಷ್ಟಪಡಿಸಿದರು.
ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆಯ ನಡುವೆ ನೇರ ಸಂಪರ್ಕಕ್ಕಾಗಿ ‘ಪಬ್ಲಿಕ್ ಐ’ ವಾಟ್ಸ್‌ಅಪ್ ಗ್ರೂಪ್ ಆರಂಭಿಸಲಾಗುವುದು ಎಂದು ತಿಳಿಸಿದರು.
ಪ್ರತೀ ಠಾಣೆಗೆ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲಾಗುವುದು ಎಂದರು.
ಯುವಜನತೆಯಲ್ಲಿ ಡ್ರಗ್ಸ್ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ‘ಸನ್ಮಿತ್ರ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
ಸೈಬರ್ ಅಪರಾಧ ನಿಯಂತ್ರಣ ಮತ್ತು ಜಾಗೃತಿಗೆ ವಿಶೇಷ ಕ್ರಮ ಕೈಗೊಳ್ಳಲಾಗುವುದು.
15 ದಿನಕ್ಕೊಮ್ಮೆ ‘ಆರಕ್ಷಕ ದಿನ’ ಆಚರಿಸಿ ಸಾರ್ವಜನಿಕರೊಂದಿಗೆ ನೇರ ಸಂವಾದ ನಡೆಸಲಾಗುವುದು.
ರಸ್ತೆ ಅಪಘಾತ ತಡೆಗೆ ಹೆಲ್ಮೆಟ್ ಧಾರಣೆಯ ಬಗ್ಗೆ ಜಾಗೃತಿ ಮೂಡಿಸಲಾಗುವುದು; ದಂಡಕ್ಕಿಂತ ಜೀವ ರಕ್ಷಣೆ ಮುಖ್ಯ ಎಂಬ ಸಂದೇಶ ನೀಡಲಾಗುವುದು.
ಕಾನೂನಿಗೆ ಗೌರವ ಕೊಡುವವರಿಗೆ ಪೊಲೀಸ್ ಇಲಾಖೆಯಿಂದ ಸಂಪೂರ್ಣ ಗೌರವ ಸಿಗಲಿದೆ; ರಾಜಕೀಯ ಒತ್ತಡವಿದ್ದರೂ ಕಾನೂನಿನ ಪ್ರಕಾರವೇ ಕಾರ್ಯನಿರ್ವಹಿಸಲಾಗುವುದು ಎಂದರು.
ಕೋಮು ಸೌಹಾರ್ದತೆ ಮತ್ತು ಶಾಂತಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಹೇಳಿದರು.
