- ಶಿವಮೊಗ್ಗ : ಭಾರತೀಯ ವೈದ್ಯಕೀಯ ಸಂಘ, ಶಿವಮೊಗ್ಗ ಶಾಖೆಯು 75 ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಬರುವ ಸೆ.27 ಮತ್ತು 28 ರಂದು ಅಮೃತ ಮಹೋತ್ಸವ ಕಾರ್ಯಕ್ರಮವು ನಿಗದಿಯಾಗಿದೆ. ದೇಶದಾದ್ಯಂತ ಸಕ್ರಿಯವಾಗಿರುವ ಅಲೋಪತಿ ವೈದ್ಯರ ಈ ಸಂಘಟನೆ ಆರಂಭವಾದದ್ದು 1928ರಲ್ಲಿ. ಭಾರತೀಯ ವೈದ್ಯಕೀಯ ಸಂಘ, ಶಿವಮೊಗ್ಗ ಶಾಖೆ ಆರಂಭವಾದದ್ದು ೧೯೪೮ರಲ್ಲಿಮೆಗ್ಗಾನ್ ಆಸ್ಪತ್ರೆಯ ಡಿಸ್ಟ್ರಿಕ್ಟ್ ಸರ್ಜನ್ ರವರ ಕಛೇರಿಯಲ್ಲಿ. ಸಂಘವು ಆ ದಿನಗಳಲ್ಲಿ ಒಂದು ಜಿಲ್ಲಾ ಶಾಖೆಯಾಗಿ ಇಡೀ ಶಿವಮೊಗ್ಗ ಜಿಲ್ಲೆಯ ಎಲ್ಲ ವೈದ್ಯರನ್ನು ಒಳಗೊಂಡಿತ್ತು. ಅಂದಿನಿಂದಲೂ ಸಾರ್ವಜನಿಕರಲ್ಲಿ ಆರೋಗ್ಯದ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದ ಹೆಗ್ಗಳಿಕೆ ನಮ್ಮ ಸಂಘದ್ದು ಎಂದು ಸಂಘದ ಮಾಜಿ ಅಧ್ಯಕ್ಷರಾದ ಪಿ.ನಾರಾಯಣ ತಿಳಿಸಿದರು.
- ಅವರು ಪತ್ರಿಕಾಗೊಷ್ಠಿಯಲ್ಲಿ ಮಾತನಾಡುತ್ತಾ ಸಾರ್ವಜನಿಕರಿಗಾಗಿ ಮಧುಮೇಹ, ರಕ್ತದೊತ್ತಡ ತಪಾಸಣೆ, ಸಾಮಾನ್ಯ ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣಾ ಶಿಬಿರಗಳು, ಕ್ಯಾನ್ಸರ್ ತಪಾಸಣಾ ಶಿಬಿರಗಳು, ಕುಟುಂಬ ಯೋಜನೆ ಶಸ್ತ್ರಚಿಕಿತ್ಸಾ ಶಿಬಿರಗಳು ಮೊದಲಾದ ಉಪಯುಕ್ತ ಚಟುವಟಿಕೆಗಳನ್ನು ಶಿವಮೊಗ್ಗದ ಜನತೆಗಾಗಿ ಸಂಘವು ನಿರಂತರವಾಗಿ ನಡೆಸಿಕೊಂಡುಬಂದಿದೆ ಎಂದರು.
- 75 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಈ ಸಂದರ್ಭದಲ್ಲಿ ವರ್ಷ ಪೂರ್ತಿ ಹಲವು ಆಯಾಮಗಳಲ್ಲಿ ಸಾರ್ವಜನಿಕರ ಆರೋಗ್ಯವನ್ನು ವೃದ್ಧಿಸುವ ಕಾರ್ಯಕ್ರಮಗಳನ್ನು ಆಯೋಜಿಸಿದ ಸಂತೃಪ್ತಿ ಸಂಘಕ್ಕೆ ಇದೆ. ಆಕಾಶವಾಣಿ ಭದ್ರಾವತಿಯ ಮೂಲಕ ಪ್ರತಿ ಸೋಮವಾರ ಬೆಳಿಗ್ಗೆ 8-45 ಕ್ಕೆ ಪ್ರಸಾರವಾದ ನುರಿತ ವೈದ್ಯರಿಂದ ಒಟ್ಟು ೩೪ ಆರೋಗ್ಯ ಉಪನ್ಯಾಸಗಳು, ಶಾಲೆಗಳಲ್ಲಿ, ವಿವಿಧ ಸಂಘಗಳಲ್ಲಿ ಸಿಪಿಆರ್ ಶಿಕ್ಷಣ (ಹೃದಯ ಮತ್ತು ಶ್ವಾಸಕೋಶ ಪುನಃ ಶ್ವೇತನಕ್ರಿಯೆ), ಒಟ್ಟು ೧೯, ಐಎಂಎ ಶಿವಮೊಗ್ಗ ಯ್ಯುಟ್ಯೂಬ್ ಚಾನೆಲ್ ಮೂಲಕ ತಜ್ಞವೈದ್ಯರಿಂದ ಆರೋಗ್ಯ ಸಂಬಂಧಿ ಉಪನ್ಯಾಸ ಮತ್ತು ಸಂದರ್ಶನಗಳು, ಒಟ್ಟು ೨೦, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸ್ವಚ್ಛತೆ, ಪೌಷ್ಟಿಕ ಆಹಾರ, ಹದಿಹರೆಯದವರ ಆರೋಗ್ಯ, ಪರೀಕ್ಷೆ ಎದುರಿಸುವುದು ಹೇಗೆ ಮೊದಲಾದ ವಿಷಯಗಳ ಕುರಿತು ಉಪನ್ಯಾಸ, ಸಂವಾದ, ಒಟ್ಟು ೫೦ ಮೊದಲಾದುವು. ಆಯ್ದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹಿಮೋಗ್ಲೋಬಿನ್ ತಪಾಸಣೆ, ಆರೋಗ್ಯ ತಪಾಸಣೆ, ಮಹಿಳಾ ಸಂಘಗಳಲ್ಲಿ ಆರೋಗ್ಯ ಉಪನ್ಯಾಸ, ತಪಾಸಣೆ ಮೊದಲಾದ ಚಟುವಟಿಕೆಗಳ ಮೂಲಕ ಸಾರ್ವಜನಿಕರಲ್ಲಿ ಆರೋಗ್ಯದ ಅರಿವನ್ನು ಹೆಚ್ಚಿಸುವ ಶ್ರೇಷ್ಠ ಕೆಲಸವನ್ನು ಸಂಘವು ಮಾಡಿದೆ ಎಂದರು.
ಸೆ.27 ಮತ್ತು 28 ರಂದು ಸಂಘವು ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸೆ.27 ರಂದು ರಾಮನ್ ಸಹೋದರಿಯರಿಂದ ವೀಣಾವಾದನ, ವೈದ್ಯರ ಛಾಯಾ ಚಿತ್ರಪ್ರದರ್ಶನವಿದ್ದು, ಸೆ.28 ರಂದು ಸದಸ್ಯರಿಗಾಗಿ ವಿವಿಧ ವಿಷಯಗಳ ಬಗ್ಗೆ ತಜ್ಞರಿಂದ ವೈಜ್ಞಾನಿಕ ಗೋಷ್ಠಿಗಳು ಹಾಗೂ ಸಂಜೆ ಸಮಾರೋಪ ಸಮಾರಂಭವಿದೆ. ಹಿರಿಯ ಮನೋವೈದ್ಯರೂ, ಪದ್ಮಶ್ರೀ ಪುರಸ್ಕೃತರೂ, ರಾಷ್ಟ್ರೀಯ ವೈದ್ಯಕೀಯ ಆಯೋಗದ ಪೂರ್ವಾಧ್ಯಕ್ಷರೂ ಆಗಿರುವ ಡಾ ಬಿ.ಎನ್.ಗಂಗಾಧರ್, ನಿಮಾನ್ಸ್‌ನ ಸಹ ಪ್ರಾಂಶುಪಾಲರಾದ ಡಾ ವೈ.ಸಿ ಜನಾರ್ಧನ್ ರೆಡ್ಡಿ, ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ ರಾಜ್ಯ ಶಾಖೆಯ ಅಧ್ಯಕ್ಷರಾದ ಡಾ ವಿ.ವಿ ಚಿನಿವಾಲರ್ ಮೊದಲಾದ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಎಂದರು.
ಸಮಾರೋಪ ಸಮಾರಂಭದಲ್ಲಿ ಸಂಘದ ಅಧ್ಯಕ್ಷರಾಗಿ ಹಾಗೂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಎಲ್ಲ ವೈದ್ಯರನ್ನ್ಲು ಗೌರವಿಸಿ ಸನ್ಮಾನಿಸಲಾಗುವುದು ಎಂದರು
ಸೆ. 27 ರ ಬೆಳಿಗ್ಗೆ 8 ಗಂಟೆಗೆ ಅಮೃತ ನಡಿಗೆ, ವೈದ್ಯ ಸದ್ಯಸ್ಯರು ತಮ್ಮ ಒಗ್ಗಟ್ಟು ಹಾಗೂ ಜನ ಸಾಮಾನ್ಯರ ಆರೋಗ್ಯದ ಬಗೆಗಿರುವ ಕಾಳಜಿಯನ್ನು ತೋರಲು ಜಾಥಾ ಹಮ್ಮಿಕೊಳ್ಳಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಕೆ.ಆರ್.ಶ್ರೀಧರ್, ಅಧ್ಯಕ್ಷರಾದ ಶ್ರೀಧರ್ ಎಸ್, ಡಾ. ವಿನಯ ಶ್ರೀನಿವಾಸ್, ಡಾ.ವಿಶಾಲಾಕ್ಷಿ ಮೂಗಿ ಉಪಸ್ಥಿತರಿದ್ದರು.
