ಶಿವಮೊಗ್ಗ : ಕೋಟೆ ಮಾರಿಕಾಂಬ ದೇವಸ್ಥಾನ ಜಾತ್ರೆ ನಾಳೆಯಿಂದ ಪ್ರಾರಂಭವಾಗುತ್ತಿದ್ದು, ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಮರಿಯಪ್ಪ ತಿಳಿಸಿದ್ದಾರೆ.
ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯ ಸಭೆ ನಡೆಸಿ ಯಾವುದೇ ತೊಂದರೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಈ ಬಾರಿ ಜಾತ್ರೆಯ ವಿಶೇಷ ಆಕರ್ಷಣೆಯಾಗಿ ೪೮ ಅಡಿ ಎತ್ತರದ ಮಹಾಕಾಳಿ ಪ್ರತಿಮೆ ಸ್ಥಾಪಿಸಲಾಗಿದ್ದು, ಇದು ರಾಜ್ಯದಲ್ಲೇ ಪ್ರಥಮವಾಗಿದೆ. ಅದ್ದೂರಿ ಅಲಂಕಾರ ಮಾಡಲಾಗಿದ್ದು, ಜರ್ಮನ್ ಟೆಂಟ್ ಅಳವಡಿಸಿ ಭಕ್ತರಿಗೆ ಅನುಕೂಲಕರ ವ್ಯವಸ್ಥೆ ಮಾಡಲಾಗಿದೆ. ಅಲಂಕಾರವನ್ನು ಶ್ರೀಕಾಂತ್ ಅವರ ನೇತೃತ್ವದಲ್ಲಿ ಸುಮಾರು ೧೦ ಸಾವಿರ ಗುಲಾಬಿ ಹೂಗಳಿಂದ ಮಾಡಲಾಗುತ್ತಿದೆ. ಒಟ್ಟು ೧೫ ಸಮಿತಿಗಳನ್ನು ರಚಿಸಿ ಜಾತ್ರೆ ವ್ಯವಸ್ಥೆಯನ್ನು ಸುಸೂತ್ರವಾಗಿ ನಿರ್ವಹಿಸಲಾಗುತ್ತಿದೆ ಎಂದರು.
ವಿವಿಐಪಿ ಪಾಸ್ಗಳು ಸಿದ್ಧವಾಗಿವೆ. ವಿಕಲಾಂಗರಿಗೆ ಮತ್ತು ವಿವಿಐಪಿಗಳಿಗೆ ವಿಶೇಷ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದ್ದು, ವಿಶೇಷ ದರ್ಶನಕ್ಕೆ ೨೦೦ ರೂ. ನಿಗದಿಪಡಿಸಲಾಗಿದೆ. ಕೆಳಗಡೆ ಮತ್ತು ಮೇಲ್ಗಡೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಗಾಂಧಿಬಜಾರ್ ಪ್ರದೇಶದಲ್ಲೂ ಅಗತ್ಯ ಸೌಕರ್ಯ ಒದಗಿಸಲಾಗಿದೆ.
ಜಾತ್ರೆಯ ಆರಂಭದಲ್ಲಿ ಕಾಯಿ ಒಡೆಯಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಪ್ರಸಾದ ವಿತರಣೆಗಾಗಿ ಎರಡು ಬದಿಗಳಲ್ಲಿ ಕೌಂಟರ್ಗಳನ್ನು ತೆರೆಯಲಾಗಿದ್ದು, ಪ್ರತಿ ಐದು ದಿನಗಳ ಕಾಲ ೫ ರಿಂದ ೧೦ ಸಾವಿರ ಜನರಿಗೆ ಪ್ರಸಾದ ವಿತರಣೆ ನಡೆಯಲಿದೆ. ಇದಕ್ಕಾಗಿ ಐದು ಜನ ಭಟ್ಟರ ತಂಡವನ್ನು ನಿಯೋಜಿಸಲಾಗಿದೆ ಎಂದರು.
ಪಾರ್ಕಿಂಗ್ ವ್ಯವಸ್ಥೆ, ಅಗ್ನಿಶಾಮಕ ದಳ ಹಾಗೂ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ. ೮ ವಾಚ್ ಟವರ್ಗಳು ಹಾಗೂ ಸಿಸಿ ಕ್ಯಾಮರಾ ಅಳವಡಿಸಿ ಭದ್ರತಾ ಕ್ರಮಗಳನ್ನು ಬಲಪಡಿಸಲಾಗಿದೆ. ವಿದ್ಯುತ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಾತ್ರೆಯನ್ನು ಮಾದರಿ ಹಬ್ಬವನ್ನಾಗಿ ಯಶಸ್ವಿಯಾಗಿ ನಡೆಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಪ್ಲಾಸ್ಟಿಕ್ ನಿಷೇಧ ಮಾಡಲಾಗಿದ್ದು, ಗೋಧಿ ಚೀಲಗಳ ಬಳಕೆಗೆ ಉತ್ತೇಜನ ನೀಡಲಾಗಿದೆ. ಯಾವುದೇ ಅಂಗಡಿಯಲ್ಲಿ ಪ್ಲಾಸ್ಟಿಕ್ ಚೀಲ ಬಳಸಬಾರದು ಎಂದು ಸೂಚಿಸಲಾಗಿದೆ.
ಸಮಿತಿಯಿಂದ ಯಾವುದೇ ದೇಣಿಗೆ ಕೇಳುವ ಪರಿಪಾಠ ಇಲ್ಲದೆ, ಭಕ್ತರು ಸ್ವಯಂಪ್ರೇರಿತವಾಗಿ ದೇಣಿಗೆ ನೀಡುತ್ತಿದ್ದಾರೆ. ದೇವಸ್ಥಾನ ಸುತ್ತಮುತ್ತ ಅಂಗಡಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಸಮಗ್ರ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸಂದರ್ಭದಲ್ಲಿ ಮಂಜುನಾಥ್, ಮಂಜುನಾಥ್, ಲೋಕೋಶ್, ಟಿ ಎಸ್ ಚಂದ್ರಶೇಖರ್ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಕೋಟೆ ಮಾರಿಕಾಂಬ ಜಾತ್ರೆಗೆ ಸಕಲ ಸಿದ್ದತೆ
All ready for the Kote Marikamba fair
