ಹುಲಿಕಲ್ ಘಾಟಿ: ಪ್ರಸಿದ್ಧ ಹುಲಿಕಲ್ ಘಾಟಿಯ ರಸ್ತೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಭೀಕರ ಮಣ್ಣು ಕುಸಿತದ ದುರಂತ ಸಂಭವಿಸಿದೆ. ಘಟನೆ ಶ್ರೀ ಚಂಡಿಕಾಂಬಾ ದೇವಸ್ಥಾನದ ಸಮೀಪದ ಹೇರ್‌ಪಿನ್ ತಿರುವಿನಲ್ಲಿ ನಡೆದಿದೆ.

ಸ್ಥಳೀಯ ಮಾಹಿತಿ ಪ್ರಕಾರ, ಕಾಮಗಾರಿಯ ಸಮಯದಲ್ಲಿ ಏಕಾಏಕಿ ಮೇಲ್ಭಾಗದಿಂದ ಭಾರೀ ಪ್ರಮಾಣದ ಮಣ್ಣು ಕಾರ್ಮಿಕರ ಮೇಲೆ ಜರಿದು ಬಿದ್ದಿದೆ. ಪರಿಣಾಮವಾಗಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಣ್ಣಿನಡಿ ಇನ್ನೂ ಕೆಲವರು ಸಿಲುಕಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಮೃತರ ವಿವರಗಳು:
ರಾಘವೇಂದ್ರ, ತಂದೆ ಕೃಷ್ಣಮೂರ್ತಿ, 37 ವರ್ಷ, ಚಕ್ಕಾರು ನಗರ
ರಾಜು, 30 ವರ್ಷ, ನೀಲವಗಲ್ಲು, ಹಾವೇರಿ ತಾಲೂಕು
ಶಬ್ಬೀರ್, 40 ವರ್ಷ, ನೆಲವಗಲ್ಲು
ಗಂಭೀರವಾಗಿ ಗಾಯಗೊಂಡವರು: ಸುಮಂತ ಮತ್ತು ಪರಮೇಶ್.
ಘಟನೆಯ ಮಾಹಿತಿ ತಕ್ಷಣ ನೀಡಲಾಯಿತು, ಸ್ಥಳಕ್ಕೆ ನಗರ ಪೊಲೀಸ್ ಸಿಬ್ಬಂದಿ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ತೀವ್ರವಾಗಿ ಮುಂದುವರಿಯುತ್ತಿದೆ. ಈ ನಡುವೆ ಓರ್ವ ಕಾರ್ಮಿಕರನ್ನು ರಕ್ಷಿಸಲಾಗಿದೆ.
ಘಟನೆಯ ಹಿನ್ನೆಲೆ: ಹುಲಿಕಲ್ ಘಾಟಿಯ ಈ ಹೇರ್‌ಪಿನ್ ತಿರುವಿನಲ್ಲಿ ಇತ್ತೀಚೆಗೆ ನಿರಂತರವಾಗಿ ಮಣ್ಣು ಕುಸಿಯುತ್ತಿದ್ದು, ರಸ್ತೆ ದುರಸ್ತಿ ಕಾರ್ಯಾಚರಣೆ ನಡೆಯುತ್ತಿತ್ತು. ಕಾಮಗಾರಿಯ ಸಂದರ್ಭದಲ್ಲಿ ಸಂಭವಿಸಿದ ಈ ಭೀಕರ ದುರಂತದಿಂದ ಸ್ಥಳದಲ್ಲಿ ಭೀತಿಯ ವಾತಾವರಣ ಉಂಟಾಗಿದೆ.
