ಶಿವಮೊಗ್ಗ: ಮನೆ ಬೋಗ್ಯ ಕೊಡಿಸುವುದಾಗಿ ಹೇಳಿ ಅಕ್ರಮವಾಗಿ 5 ಲಕ್ಷ ಹಣ ಪಡೆದು ಮೋಸ ಮಾಡಿದ ಆರೋಪದ ಹಿನ್ನೆಲೆಯಲ್ಲಿ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಕಚೇರಿ ಮುಂಭಾಗ ಡಿಎಸ್‌ಎಸ್ ಸಂಚಾಲಕ ಚಿನ್ನಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಚಂದ್ರಿಕಾ ಎಂಬ ಮಹಿಳೆಯಿಂದ ಸುಮಾರು ಮೂರು ತಿಂಗಳ ಹಿಂದೆ ಕರಾರು ಮಾಡಿಕೊಂಡು ಹಣ ಪಡೆದು, ಅರ್ಚನಾ ಎಂಬ ಮಹಿಳೆ ಮೋಸ ಮಾಡಿದ್ದಾಳೆ ಎಂದು ಆರೋಪಿಸಿ, ಡಿವೈಎಸ್‌ಪಿಯವರಿಗೆ ದೂರು ನೀಡಲಾಗಿತ್ತು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಕರಣದಲ್ಲಿ ಕ್ರಮ ಕೈಗೊಳ್ಳದ ಸಂಬಂಧಿತ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದರೆ ಅವರನ್ನು ತಕ್ಷಣವೇ ಇಲ್ಲಿಂದ ವಾಪಸ್ ಕರೆಸಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಇಂದಿನ ಪೊಲೀಸ್ ಠಾಣೆಗಳು ಮಧ್ಯವರ್ತಿಗಳಂತೆ ವರ್ತಿಸುವುದನ್ನು ಬಿಟ್ಟು, ನೊಂದವರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದರು.
ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ ಮಾತನಾಡಿ ನೊಂದ ದಲಿತರಿಗೆ ನ್ಯಾಯ ಒದಗಿಸುವ ಉದ್ದೇಶದಿಂದಲೇ ಸರ್ಕಾರ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯವನ್ನು ಆರಂಭಿಸಿದೆ. ಆದರೆ ನ್ಯಾಯ ಒದಗಿಸಬೇಕಾದ ಅಧಿಕಾರಿಗಳೇ ಬೇಜವಾಬ್ದಾರಿತನ ತೋರುತ್ತಿದ್ದಾರೆ ಎಂದು ಆರೋಪಿಸಿದರು.
ಈ ಮಹಿಳೆಗೆ ನ್ಯಾಯ ದೊರೆಯುವವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದ ಪ್ರತಿಭಟನಾಕಾರರು, ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವರು ಇಂತಹ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂದರ್ಭದಲ್ಲಿ ನಗರ ಸಂಚಾಲಕ ಬೂದಿಗೆರೆ ಬಸವರಾಜು, ಮಹಾಲಿಂಗಪ್ಪ, ರಂಗನಾಥ್, ಪ್ರಸನ್ನ, ಸಂದೀಪ್ ಸೇರಿದಂತೆ ಡಿಎಸ್‌ಎಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
